ವಸತಿ ನಿಲಯಗಳ ಸ್ಥಾಪನೆಗೆ ಬಜೆಟ್‍ನಲ್ಲಿ ವಿಶೇಷ ಅನುದಾನ: ಮುಖ್ಯಮಂತ್ರಿ ಬೊಮ್ಮಾಯಿ
ಬೆಳಗಾವಿ, ಡಿ. 15: ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್ಸಿ)/ಪರಿಶಿಷ್ಟ ಪಂಗಡ(ಎಸ್ಟಿ) ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ವಸತಿ ನಿಲಯಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ, ಪ್ರಾದೇಶಿಕ ಕೇಂದ್ರಗಳಲ್ಲಿ ಹೆಚ್ಚುವರಿ ಸೌಲಭ್ಯ ಕಲ್ಪಿಸಲು ಮುಂದಿನ ಬಜೆಟ್‍ನಲ್ಲಿ ವಿಶೇಷ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಎಲ್. ನಾಗೇಂದ್ರ ಕೇಳಿದ ಪ್ರಶ್ನೆಗೆ ಮಧ್ಯಪ್ರವೇಶಿಸಿದ ಉತ್ತರಿಸಿದ ಅವರು, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಶೈಕ್ಷಣಿಕ ಒತ್ತಡ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಸತಿ ನಿಲಯಗಳ ಕೊರತೆಯಿಂದ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಉಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಕೇಂದ್ರಗಳಲ್ಲಿರುವ ವಸತಿ ನಿಲಯಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸಂಬಂಧಪಟ್ಟ ಇಲಾಖೆಗಳ ವಿಶೇಷ ಸಭೆಯನ್ನು ಕರೆದು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ಮುಂದಿನ ಬಜೆಟ್‍ನಲ್ಲಿ ವಿಶೇಷ ಅನುದಾನ ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದೇ ವಿಷಯಕ್ಕೆ ಆರಂಭಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿಯ ಆರು ಸರಕಾರಿ ವಿದ್ಯಾರ್ಥಿ ನಿಲಯಗಳಿವೆ. ಆ ಪೈಕಿ ಎರಡು ಬಾಡಿಯಲ್ಲಿದ್ದು, ಅವುಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.