ಸಾರಿಗೆ ಸಂಸ್ಥೆಗಳನ್ನು ಲಾಭದಾಯಕವಾಗಿಸಲು ಕ್ರಮ: ಸಚಿವ ಬಿ.ಶ್ರೀರಾಮುಲು
ಬೆಳಗಾವಿ, ಡಿ. 15: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಹಾಗೂ ವ್ಯಾಟ್ ಕಡಿತಗೊಳಿಸುವ ಸಂಬಂಧ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಇಂದಿಲ್ಲಿ ತಿಳಿಸಿದ್ದಾರೆ.
ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಪಕ್ಷೇತರ ಸದಸ್ಯ ಶರತ್ ಬಚ್ಚೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಸಾರಿಗೆ ಸಂಸ್ಥೆ ನಷ್ಟದ ಸುಳಿಯಿಂದ ಲಾಭದಾಯಕದತ್ತ ತರಲು ಸಲಹೆಗಳನ್ನು ನೀಡಲು ಸರಕಾರ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಏಕಸದಸ್ಯ ಸಮಿತಿಯನ್ನು ರಚಿಸಿದೆ. ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ, ಸಾರ್ವಜನಿಕರಿಗೆ ಹೊರೆಯಾಗದಂತೆ ಸಂಸ್ಥೆಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.
ಜೊತೆಗೆ ಟೋಲ್‍ಗಳಲ್ಲಿ ಸಾರಿಗೆ ಸಂಸ್ಥೆ ವಾಹನಗಳಿಗೆ ಮುಕ್ತ ಸಂಚಾರಕ್ಕೂ ಅವಕಾಶ ಕಲ್ಪಿಸುವ ಸಂಬಂಧ ಅಧಿಕಾರಿಗಳ ಜೊತೆಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿ. ಶ್ರೀರಾಮುಲು ತಿಳಿಸಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಶರತ್ ಬಚ್ಚೇಗೌಡ, ಮೂರು ವರ್ಷಗಳಿಂದ ಸಾರಿಗೆ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕಿದ್ದು ಇದಕ್ಕೆ ಮೂಲ ಕಾರಣ ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಹಾಗೂ ವ್ಯಾಟ್ ಹೆಚ್ಚಳ. ಹೀಗಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ತೆರಿಗೆ ಕಡಿಮೆ ಮಾಡಿಸಬೇಕು. ಜೊತೆಗೆ ಟೋಲ್‍ಗಳಲ್ಲಿ ಸಾರಿಗೆ ವಾಹನಗಳಿಗೆ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ವಿದ್ಯಾರ್ಥಿ ಬಸ್ ಪಾಸ್ ಮೊತ್ತವನ್ನು ಸರಕಾರ ತ್ವರಿತಗತಿಯಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಚಾರ ಮಿತಿ ಹೆಚ್ಚಳ ಪರಿಶೀಲನೆ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳಲ್ಲಿ ವಿದ್ಯಾರ್ಥಿಗಳ ಬಸ್ ಪಾಸ್ ಸಂಚಾರ ಮಿತಿಯನ್ನು 100 ಕಿ.ಮೀ.ಗೆ ಏರಿಸುವ ಬಗ್ಗೆ ಪರಿಶೀಲಿಸುವುದು ಎಂದು ಶ್ರೀರಾಮುಲು ತಿಳಿಸಿದರು.
ಜೆಡಿಎಸ್‍ನ ಹಿರಿಯ ಸದಸ್ಯ ಎಚ್.ಕೆ.ಕುಮಾರಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿದ್ಯಾರ್ಥಿ ಬಸ್ ಪಾಸ್‍ಗೆ ಹಾಲಿ ಇರುವ 60 ಕಿ.ಮೀ ಮಿತಿಯಿಂದ 100 ಕಿ.ಮೀಗೆ ಹೆಚ್ಚಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗಿರುವುದರಿಂದ ಶೈಕ್ಷಣಿಕ ದಾಖಲೆಗಳನ್ನು ಒದಗಿಸಿ ಸೇವಾಸಿಂಧು ಮೂಲಕವೂ ಬಸ್ ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಅಲ್ಲದೆ, ವಿದ್ಯಾರ್ಥಿಗಳು ತಮ್ಮ ಶಾಲೆ-ಕಾಲೇಜಿನ ಗುರುತಿನ ಚೀಟಿ, ಶುಲ್ಕ ಪಾವತಿ ರಸೀದಿಯನ್ನು ತೋರಿಸಿ ಸಾರಿಗೆ ಬಸ್‍ಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು. ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಕುಮಾರಸ್ವಾಮಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸರಕಾರ ಹೆಚ್ಚಿನ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು ಎಂದು ಕೋರಿದರು.