×
Ad

ಮತಾಂತರ ನಿಷೇಧ ಕಾಯ್ದೆ ಜಾರಿಗೆ ವಿರೋಧ: ಬೀದಿಗಿಳಿದು ಹೋರಾಟ ನಡೆಸಲು ಪ್ರಗತಿಪರ ಚಿಂತಕರು, ಜಾತ್ಯತೀತ ಮುಖಂಡರ ನಿರ್ಧಾರ

Update: 2021-12-15 21:40 IST

ಬೆಂಗಳೂರು, ಡಿ.15: ಬೆಳಗಾವಿಯಲ್ಲಿ ಪ್ರಾರಂಭವಾಗಿರುವ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗಲೇ ಇತ್ತ ಬೆಂಗಳೂರಿನಲ್ಲಿ ಸಾಹಿತಿಗಳು, ಪ್ರಗತಿಪರ ಚಿಂತಕರು, ಜಾತ್ಯತೀತ ಮುಖಂಡರು ಮತಾಂತರ ನಿಷೇಧ ಕಾಯ್ದೆ ಜಾರಿಯ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಅದಕ್ಕೂ ಮುನ್ನವೇ ರಾಜಧಾನಿಯಲ್ಲಿ ಸಭೆ ಸೇರುವ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡದಂತೆ ಸರಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಬುಧವಾರ ನಗರದ ಡಾ.ಅಂಬೇಡ್ಕರ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘವು ಆಯೋಜಿಸಿದ್ದ ಚಿಂತಕರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಂಜಗೆರೆ ಜಯಪ್ರಕಾಶ್ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿಯಿಂದ ಕ್ರೈಸ್ತರು ಮತ್ತು ಮುಸ್ಲಿಮರನ್ನು ಖಳನಾಯಕರನ್ನಾಗಿ ಬಿಂಬಿಸಲಾಗುತ್ತಿದೆ. ಈ ಮೂಲಕ ಒಂದು ಧರ್ಮ, ಸಮಾಜದವರನ್ನು ಅನುಮಾನದಿಂದ ಕಾಣುವುದು ಸಂವಿಧಾನ ಉಲ್ಲಂಘನೆ ಎಂದರು.

ಬಳಿಕ ಮಾತನಾಡಿದ ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಅವರು, ದೇಶದಲ್ಲಿ ಕೋಮುವಾದಿ ಪಕ್ಷ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದೆ. ಈ ಹಿಂದೆ ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಇಂದಿರಾಗಾಂಧಿಯವರನ್ನು ಸರ್ವಾಧಿಕಾರಿ ಎಂದಿದ್ದರು. ಆದರೆ, ಇವತ್ತು ದೇಶದಲ್ಲಿ ಆಡಳಿತ ನಡೆಸುವವರು ಮಹಾ ದುರಹಂಕಾರಿ ಮತ್ತು ಸರ್ವಾಧಿಕಾರಿಯಾಗಿದ್ದಾರೆ ಎಂದು ಪ್ರಧಾನಿ ಹೆಸರು ಹೇಳದೆ ಟೀಕಿಸಿದರು. ಇಂಥ ಪ್ರಧಾನಿಗೆ ಇತ್ತೀಚಿಗೆ ನಮ್ಮ ರೈತರು ಕ್ಷಮೆ ಕೇಳುವಂತೆ ಮಾಡಿದರು ಎಂದು ಅವರು ಛೇಡಿಸಿದರು.

ಬಳಿಕ ಪ್ರೊ.ಎಲ್.ಎನ್.ಮುಕುಂದರಾಜ್, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಪಾರ್ವತೀಶ ಬಿಳದಾಳೆ ಸೇರಿದಂತೆ ಮೊದಲಾದವರು ಮಾತನಾಡಿ ಮತ್ತಾಂತರ ನಿಷೇಧ ಕಾಯ್ದೆ ಜಾರಿಯನ್ನು ಬಲವಾಗಿ ವಿರೋಧಿಸಿದರು. ಹೋರಾಟಗಾರ ನಗರಿ ಬಾಬಯ್ಯ, ಡಾ.ಲಕ್ಷ್ಮೀನಾರಾಯಣ ನಾಗವಾರ, ರಫಾಯಲ್ ರಾಜ್ ಉಪಸ್ಥಿತರಿದ್ದರು. ಫಾದರ್ ಎ.ತೋಮಾಸ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುನ್ನ ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಭಿತ್ತಿ ಪತ್ರವನ್ನು ಪ್ರದರ್ಶಿಸಿದರು. 

ಇದು ಆರೆಸ್ಸೆಸ್ಸ್ ಕುತಂತ್ರ

‘ಮತಾಂತರ ನಿಷೇಧ ಕಾಯ್ದೆ ಜಾರಿ ಆರೆಸೆಸ್ ಕುತಂತ್ರವಾಗಿದೆ. ಜಾತ್ಯತೀತ ಮೂಲದಿಂದ ಬಂದ ಮತ್ತು ಲಿಂಗಾಯತ ಸಮುದಾಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾಯ್ದೆಯನ್ನು ಜಾರಿಗೊಳಿಸಿದರೆ ಅದು ಬಸವಣ್ಣನವರಿಗೆ ಮಾಡಲಾದ ದ್ರೋಹ. ಯಾಕೆಂದರೆ, ಬಸವಣ್ಣನವರು 12ನೆ ಶತಮಾನದಲ್ಲಿ ಶೋಷಿತ ವರ್ಗದವರಿಗೆ ಸಾಮಾಜಿಕ ಸ್ಥಾನಮಾನ ಕಲ್ಪಿಸಲು ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದರು.’

-ಪ್ರೊ. ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News