ಜನವರಿ ಒಂದರಿಂದ ಎಂಎಸ್‍ಪಿ ಖರೀದಿ ಕೇಂದ್ರ ಪ್ರಾರಂಭ: ಸಚಿವ ಉಮೇಶ್ ಕತ್ತಿ
ಬೆಂಗಳೂರು, ಡಿ.15: ಎಂಎಸ್‍ಪಿ ಖರೀದಿ ಪ್ರಕ್ರಿಯೆ ಈಗಾಗಲೇ ಆರಂಭಿಸಲಾಗಿದ್ದು, ಜನವರಿ ಒಂದರಿಂದ ಖರೀದಿ ಪ್ರಾರಂಭಿಸಲಾಗುವುದೆಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್ ಕತ್ತಿಯವರು ಉತ್ತರಿಸಿದರು.
ಶಾಸಕ ವೆಂಕಟರಾವ್ ನಾಡಗೌಡರ ಪ್ರಶ್ನೆಗೆ ವಿಧಾನಸಭೆ ಕಲಾಪದಲ್ಲಿ ಉತ್ತರಿಸಿದ ಸಚಿವ ಉಮೇಶ್ ಕತ್ತಿ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ, ರಾಗಿ ಹಾಗೂ ಜೋಳ ಖರೀದಿಯ ನೋಂದಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭಿಸಲಾಗಿದೆ. ಜನವರಿ ಒಂದರಿಂದ ರಾಜ್ಯದಲ್ಲಿ ಖರೀದಿ ಪ್ರಾರಂಭಿಸಲಾಗುವುದೆಂದು ತಿಳಿಸಿದರು.
ಕೇಂದ್ರ ಸರಕಾರದ ಆದೇಶದ ಅನ್ವಯ, 5ಲಕ್ಷ ಮೆ.ಟನ್ ಭತ್ತ, 2.10 ಲಕ್ಷ ಮೆ.ಟನ್ ರಾಗಿ ಹಾಗೂ 1.10 ಲಕ್ಷ ಮೆ.ಟನ್ ಜೋಳವನ್ನು ಖರೀದಿ ಮಾಡಲು ಈಗಾಗಲೇ ಆದೇಶ ನೀಡಲಾಗಿದೆ, ಇದರ ಹೊರತಾಗಿಯೂ, ಜೋಳ, ರಾಗಿ ಹಾಗೂ ಭತ್ತವನ್ನು ನೋಂದಣಿ ಮಾಡಿದ್ದರೆ ಖರೀದಿ ಮಾಡಲಾಗುವುದೆಂದು ವಿಧಾನಸಭೆಯ ಕಲಾಪದಲ್ಲಿ ಸಚಿವ ಉಮೇಶ್ ಕತ್ತಿ ಸ್ಪಷ್ಟಪಡಿಸಿದರು.
ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿರುವ ಹಿನ್ನೆಲೆ, ಇದುವರೆಗೂ 15078 ಮೆ.ಟನ್ ಭತ್ತ ಮಾರಾಟ ಮಾಡಲು ರೈತರು ನೋಂದಣಿ ಮಾಡಿರುತ್ತಾರೆ ಎಂದು ಈ ವೇಳೆ ಸಚಿವರಾದ ಉಮೇಶ್ ಕತ್ತಿಯವರು ಸದನಕ್ಕೆ ತಿಳಿಸಿದರು.