×
Ad

ಅವಧಿ ಮುಗಿದರೂ ಹಣ ವಸೂಲಿ ಮಾಡುತ್ತಿರುವ ಟೋಲ್ ಗಳ ಕುರಿತು ಚರ್ಚೆ: ಸಚಿವ ಸಿ.ಸಿ.ಪಾಟೀಲ್

Update: 2021-12-15 23:08 IST

ಬೆಳಗಾವಿ, ಡಿ.15: ರಾಜ್ಯದಲ್ಲಿ ಗುತ್ತಿಗೆ ಅವಧಿ ಮುಗಿದರೂ, ಹಣ ವಸೂಲಿ ಮಾಡುತ್ತಿರುವ ಟೋಲ್‍ಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.

ಬುಧವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆ ಕೆ.ಟಿ.ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಿಂದ ತುಮಕೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಟೋಲ್‍ಗಳಲ್ಲಿ ವಾಹನಗಳಿಂದ ಹಣ ಸಂಗ್ರಹ ಅವಧಿ ಮುಗಿದ್ದರೂ, ವಸೂಲಿ ಮಾಡುತ್ತಿರುವ ಕುರಿತು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಪ್ರೀಂ ಕೋರ್ಟಿನ ಮೊರೆ ಹೋಗಿದೆ ಎಂದರು.

ಬಳಿಕ ಸಚಿವರ ಉತ್ತರಕ್ಕೆ ಪ್ರತಿಕ್ರಿಯಿಸಿದ ಕೆ.ಟಿ.ಶ್ರೀಕಂಠೇಗೌಡ, ಈ ವ್ಯಾಪ್ತಿಯ ಟೋಲ್ ಅವಧಿ ಮುಗಿದು 6 ತಿಂಗಳಾದರೂ, ಏಕೆ ಸುಲಿಗೆ ಮಾಡಲಾಗುತ್ತಿದೆ. ಇದನ್ನು ತೆರವು ಮಾಡಲು ಮುಂದಾಗಬೇಕು. ಅಷ್ಟೇ ಅಲ್ಲದೆ, ಒಂದು ದಿನಕ್ಕೆ 50 ಲಕ್ಷ ರೂ. ವಸೂಲಿ ಮಾಡಲಾಗುತ್ತಿದೆ ಎಂದು ಸದನದ ಗಮನ ಸೆಳೆದರು.

ಆಗ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಒಂದು ದಿನಕ್ಕೆ 50 ಲಕ್ಷ ವಸೂಲಿ ಮಾಡಲಾಗುತ್ತಿದೆ ಎಂದರೆ ಗಂಭೀರ ವಿಚಾರ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸದನಕ್ಕೆ ಉತ್ತರಿಸಿ ಎಂದಾಗ, ಸಚಿವರು ಇದಕ್ಕೆ ಸಮ್ಮತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News