ಕ್ಯಾಪಿಟಲ್ ಹಿಲ್ಸ್ ದಂಗೆ ಪ್ರಕರಣ: ಟ್ರಂಪ್ ಸಹಾಯಕನ ವಿರುದ್ಧ ಪ್ರಕರಣಕ್ಕೆ ಸಂಸತ್ ಅನುಮೋದನೆ

Update: 2021-12-15 18:13 GMT
ಡೊನಾಲ್ಡ್ ಟ್ರಂಪ್ (ಫೋಟೊ : PTI)

ವಾಷಿಂಗ್ಟನ್, ಡಿ.15: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಸಹಾಯಕ ಅಧಿಕಾರಿ ಮಾರ್ಕ್ ಮೆಡೋಸ್ ವಿರುದ್ಧ ಸಂಸತ್ತಿಗೆ ಅಗೌರವ ತೋರಿದ ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸುವ ಪ್ರಸ್ತಾವನೆಗೆ ಅಮೆರಿಕ ಸಂಸತ್ತಿನ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ ಅನುಮೋದನೆ ನೀಡಿದೆ. ‌

ಅಮೆರಿಕದ ಕ್ಯಾಪಿಟಲ್ ಹಿಲ್ಸ್ ಮೇಲೆ ಜನವರಿಯಲ್ಲಿ ನಡೆದ ಮುತ್ತಿಗೆ ಪ್ರಕರಣದ ವಿಚಾರಣೆಯಲ್ಲಿ ಸಹಕರಿಸಲು ನಿರಾಕರಿಸಿದ್ದಕ್ಕಾಗಿ, ಟ್ರಂಪ್ ಆಡಳಿತದ ಸಂದರ್ಭ ಶ್ವೇತಭವನ ಸಿಬಂದಿಗಳ ಮುಖ್ಯಸ್ಥರಾಗಿದ್ದ ಮೆಡೋಸ್ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವಂತೆ ನ್ಯಾಯ ಇಲಾಖೆಗೆ ಶಿಫಾರಸು ಮಾಡುವ ಪ್ರಸ್ತಾವನೆಗೆ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ 222-208 ಮತಗಳಿಂದ ಅನುಮೋದನೆ ನೀಡಿದೆ. ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಜೋ ಬೈಡನ್ ಗೆದ್ದಿದ್ದಾರೆ ಎಂದು ಘೋಷಿಸುವ ಪ್ರಕ್ರಿಯೆಗೆ ಅಡ್ಡಿತರುವ ಉದ್ದೇಶದಿಂದ ಪರಾಜಿತ ಅಭ್ಯರ್ಥಿ ಟ್ರಂಪ್ ಬೆಂಬಲಿಗರು ಜನವರಿ 6ರಂದು ಅಮೆರಿಕದ ಕ್ಯಾಪಿಟಲ್ ಹಿಲ್ಸ್ ಕಚೇರಿಗೆ ಮುತ್ತಿಗೆ ಹಾಕಿ ಅಲ್ಲಿ ದಾಂಧಲೆ ನಡೆಸಿದ್ದರಲ್ಲದೆ ಪೊಲೀಸರ ಜತೆ ಸಂಘರ್ಷಕ್ಕೂ ಇಳಿದಿದ್ದರು. 

ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಂಸತ್ ಸಮಿತಿಗೆ ಆರಂಭದಲ್ಲಿ ಪೂರ್ಣ ಸಹಕಾರ ನೀಡುತ್ತಿದ್ದ ಮೆಡೋಸ್ ಬಳಿಕ ಅಸಹಕಾರ ತೋರಿದ್ದರು. ಸಮಿತಿ ಮಾಡಿರುವ ಕಾರ್ಯವು ಇತಿಹಾಸದಲ್ಲಿ ದಾಖಲಾಗಲಿದೆ ಎಂದು ಸದನ ತನಿಖಾ ಸಮಿತಿಯ ಅಧ್ಯಕ್ಷ, ಡೆಮೊಕ್ರಾಟಿಕ್ ಸಂಸದ ಬೆನ್ನೀ ಥಾಮ್ಸನ್ ಹೇಳಿದ್ದಾರೆ. ಮೆಡೋಸ್ ವಿರುದ್ಧ ವಿಚಾರಣೆ ಆರಂಭಿಸುವ ನಿರ್ಧಾರಕ್ಕೆ ಬಂದಿದ್ದ ಸಮಿತಿ ಇದನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಅನುಮೋದನೆಗೆ ಸೋಮವಾರ ಕಳುಹಿಸಿತ್ತು. 

ಡೆಮೊಕ್ರಾಟಿಕ್ ಪಕ್ಷಕ್ಕೆ ಬಹುಮತ ಇರುವ ಕೆಳಮನೆಯಲ್ಲಿ ಪ್ರಸ್ತಾವನೆಯ ಪರ ರಿಪಬ್ಲಿಕನ್ ಪಕ್ಷದ ಲಿರ್ ಚೆನೆಯ್ ಮತ್ತು ಆ್ಯಡಮ್ ಕಿನ್ಜಿಂಗರ್ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಗಲಭೆಯ ಸಂದರ್ಭದಲ್ಲಿ ಟ್ರಂಪ್‌ ರೊಂದಿಗೆ ಮೆಡೋವ್‌ಗೆ ಇದ್ದ ಸಾಮೀಪ್ಯವು ಮಾರಣಾಂತಿಕ ಘಟನೆಯಲ್ಲಿ ಟ್ರಂಪ್ ಅವರ ಸಂಪೂರ್ಣ ಪಾತ್ರವನ್ನು ನಿರ್ಧರಿಸುವಲ್ಲಿ ಮೆಡೋವ್ರನ್ನು ಪ್ರಮುಖ ಸಾಕ್ಷಿಯನ್ನಾಗಿ ಮಾಡುತ್ತದೆ ಎಂದು ಸಮಿತಿ ಹೇಳಿದೆ. ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವ ಬಗ್ಗೆ ನ್ಯಾಯ ಇಲಾಖೆ ನಿರ್ಧರಿಸಲಿದೆ. ಒಂದು ವೇಳೆ ಆರೋಪ ಸಾಬೀತಾದರೆ 1 ವರ್ಷದ ಜೈಲುಶಿಕ್ಷೆ ವಿಧಿಸಲಾಗುವುದು. ಇದೇ ಪ್ರಕರಣದಲ್ಲಿ ಟ್ರಂಪ್ ಅವರ ಸಲಹೆಗಾರರಾಗಿದ್ದ ಸ್ಟೀವ್ ಬ್ಯಾನನ್ ವಿರುದ್ಧ ಪ್ರಕರಣ ದಾಖಲಿಸಲು ಕಳೆದ ನವೆಂಬರ್‌ನಲ್ಲಿ ಸಮಿತಿ ಶಿಫಾರಸು ಮಾಡಿದೆ. 

ನ್ಯಾಯ ಇಲಾಖೆಗೆ ಶಿಫಾರಸು ಮಾಡಿರುವ ಸಂಸತ್ತಿನ ಕ್ರಮವನ್ನು ರಿಪಬ್ಲಿಕನ್ ಪಕ್ಷದ ಸಂಸದ ಟಾಮ್ ಕೋಲೆ ಟೀಕಿಸಿದ್ದು, ಇದು ಅಕಾಲಿಕ ಹುಚ್ಚು ಕ್ರಮ ಎಂದು ಬಣ್ಣಿಸಿದ್ದಾರೆ. ಟ್ರಂಪ್ ಹಾಗೂ ಮೆಡೋಸ್ ಸದನ ಸಮಿತಿಯ ವಿರುದ್ಧ ಕಾನೂನು ಕ್ರಮ ಆರಂಭಿಸಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ಮೆಡೋಸ್ ವಿಚಾರಣೆಗೆ ಸಹಕರಿಸಿಲ್ಲ ಎಂಬುದು ಸರಿಯಲ್ಲ. ಶ್ವೇತಭವನದ ಉನ್ನತ ಅಧಿಕಾರಿಯಾಗಿದ್ದ ಅವರನ್ನು ಸಂಸತ್ತಿನ ವಿಚಾರಣೆಗೆ ಹಾಜರಾಗುವಂತೆ ಬಲವಂತ ಪಡಿಸುವಂತಿಲ್ಲ ಮತ್ತು ಪ್ರಕರಣದ ಸಾಕ್ಷಿಯಾಗಿರುವ ಅವರು ಟ್ರಂಪ್ ಪ್ರತಿಪಾದಿಸುವ ಕಾರ್ಯನಿರ್ವಾಹಕ ಸವಲತ್ತನ್ನು ಬಿಟ್ಟುಕೊಡುವಂತಿಲ್ಲ ಎಂದು ಮೆಡೋಸ್ ಪರ ವಕೀಲರು ವಾದಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News