ಚಿಕ್ಕಮಗಳೂರು: ಧ್ವಜ ಸುಟ್ಟುಹಾಕಿ ಕನ್ನಡಕ್ಕೆ ಅಪಮಾನ; ಕಿಡಿಗೇಡಿಗಳ ಬಂಧನಕ್ಕೆ ಕನ್ನಡ ಸೇನೆ ಒತ್ತಾಯ
ಚಿಕ್ಕಮಗಳೂರು, ಡಿ.15: ರಾಜ್ಯದ ಗಡಿಯಲ್ಲಿ ಪುಂಡಾಟಿಕೆ ಮೂಲಕ ಕನ್ನಡ ಧ್ವಜವನ್ನು ಸುಟ್ಟುಹಾಕಿ ಕನ್ನಡಿಗರಲ್ಲಿ ಕೋಮುಧ್ವೇಷ ಕೆರಳುವಂತೆ ಮಾಡಿರುವ ಎಂಇಎಸ್‍ನ ಕಿಡಿಗೇಡಿಗಳನ್ನು ಸರ್ಕಾರ ಗಡಿಪಾರು ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಸೇನೆ ವೇದಿಕೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಒತ್ತಾಯಿಸಿದರು.
ನಗರದ ಆಜಾದ್ ಪಾರ್ಕ್ ವೃತ್ತದ ಎದುರು ಧರಣಿ ನಡೆಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ ಅವರು, ರಾಜ್ಯದಲ್ಲಿ ಪರಭಾಷಿಗರು ಹಾಗೂ ಕನ್ನಡಿಗರು ಎಲ್ಲರೂ ಒಂದೇ ಎಂಬಂತೆ ಸೌಹಾರ್ದದಿಂದ ಬಾಳುತ್ತಿದ್ದೇವೆ. ಈ ನಡುವೆ ಎಂ.ಇ.ಎಸ್‍ನ ಕಾಯರ್ಕಕರ್ತರು ಕನ್ನಡದ ಧ್ವಜವನ್ನು ಸುಟ್ಟುಹಾಕುವ ಮೂಲಕ ಕನ್ನಡಿಗರಲ್ಲಿ ಧ್ವೇಷ ಉಂಟಾಗುವಂತೆ ಮಾಡಿದ್ದಾರೆ ಇಂತಹ ಕಿಡಿಗೇಡಿಗಳನ್ನು ರಾಜ್ಯದಿಂದ ಗಡಿಪಾರು ಮಾಡುವ ಜತೆಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇಂತಹ ಕೃತ್ಯಗಳು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಆಪತ್ತು ತರುವ ಭೀತಿ ಇದ್ದು ಇದನ್ನು ಹೀಗಿನಿಂದಲೇ ಮಟ್ಟಹಾಕಬೇಕು, ಈ ನಿಟ್ಟಿನಲ್ಲಿ ಕನ್ನಡದ ಅಪಮಾನ ಖಂಡಿಸಿ ಎಂಇಎಸ್ ವಿರುದ್ದ ಕನ್ನಡ ಸೇನೆ ರಾಜ್ಯಾದಂತ ಹೋರಾಟಕ್ಕೆ ಕರೆ ನೀಡಿದೆ ಕಿಡಿಗೇಡಿಗಳ ಬಂಧಿಸಿ ಸೂಕ್ತ ಶಿಕ್ಷೆಯಾಗಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.
ಈ ವೇಳೆ ಕನ್ನಡ ಸೇನೆಯ ಮರಬೈಲು ಜಗದೀಶ್, ಜಯಪ್ರಕಾಶ್, ಸತೀಶ್, ಹರೀಶ್, ಮಲ್ಲೇಶಪ್ಪ, ಕೃಷ್ಣಮೂರ್ತಿ, ಲವ, ಕಳವಾಸೆ ರವಿ ಇದ್ದರು.