ಶಿವಮೊಗ್ಗ: ಸೂಕ್ತ ಆಂಬುಲೆನ್ಸ್ ಇಲ್ಲದೆ ಗರ್ಭಿಣಿ, ಗಾಯಾಳುಗಳು ಪರದಾಟ
ಶಿವಮೊಗ್ಗ : ಶರಾವತಿ ಪ್ರದೇಶದ ಜನರಿಗೆ ಸರಿಯಾದ ಆಂಬುಲೆನ್ಸ್ ಸೇವೆ ಇಲ್ಲದೇ ತುಂಬು ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ನರಳಿದ ಅಮಾನವೀಯ ಘಟನೆ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬನ ತಲೆಗೆ ತೀವ್ರಪೆಟ್ಟು ಬಿದ್ದು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಇಲ್ಲದೇ ಪರದಾಡಿದ ಘಟನೆ ನಡೆದಿದೆ.
ಹೆರಿಗೆ ನೋವು-ಮಗು ಸಾವು
ಬುಧವಾರ ಸಂಜೆ 6 ಗಂಟೆಗೆ ಚದರವಳ್ಳಿ ಗ್ರಾಮದ ಚೈತ್ರಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕುಟುಂಬದವರು 108 ಆಂಬುಲೆನ್ಸ್‌ಗೆ ಕರೆ ಮಾಡಿ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ತಡರಾತ್ರಿಯಾದರೂ ಆಂಬುಲೆನ್ಸ್ ಬರಲಿಲ್ಲ ಎನ್ನಲಾಗಿದ್ದು, ಹೆರಿಗೆ ನೋವಿನಿಂದ ನರಳುತ್ತಿದ್ದ ತುಂಬು ಗರ್ಭಿಣಿ ಚೈತ್ರಾ ಅವರನ್ನು ಕಾರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಆಸ್ಪತ್ರೆಗೆ ಕರೆತಂದ ಕೆಲ ಹೊತ್ತಿನಲ್ಲೇ ಹೆರಿಗೆಯಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ನಡುರಾತ್ರಿ ಸಾಗರದ ಆಸ್ಪತ್ರಗೆ ಕಳುಹಿಸಲಾಯಿತು. ಆದರೆ ಮಗು ಸಾವನ್ನಪ್ಪಿಸಿದ ಘಟನೆ ನಡೆದಿದೆ.
ರಸ್ತೆ ಅಪಘಾತ:ತಲೆಗೆ ತೀವ್ರ ಗಾಯ
ಮತ್ತೊಂದು ಪ್ರಕರಣದಲ್ಲಿ ತುಮರಿ ಸಮೀಪ ರಾತ್ರಿ ಬೈಕ್ ಸವಾರರಿಬ್ಬರು ದನವೊಂದಕ್ಕೆ ಢಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ನಡೆದಿದೆ. ಸವಾರರೊಬ್ಬರ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಉಂಟಾಗಿದೆ. ನೋವು ತಾಳಲಾರದೆ ರಸ್ತೆ ಮದ್ಯೆ ಒದ್ದಾಡುತ್ತಿದ್ದರು. ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಆದರೆ ಈ ವೇಳೆ ಅಲ್ಲಿ ಹೆರಿಗೆ ನಡೆಯುತಿತ್ತು.
ಈ ಭಾಗದಲ್ಲಿ ಒಂದು ಆಂಬುಲೆನ್ಸ್ ಇದಿದ್ದರೆ ಚೈತ್ರಾ ಅವರ ಹೆಣ್ಣು ಮಗು ತಾಯಿಯ ಮಡಿಲು ಸೇರುತ್ತಿತ್ತು. ಜೊತೆಗೆ ಕುಟುಂಬದವರು ಸಂತಸದಲ್ಲಿರುತ್ತಿದ್ದರು. ಅಲ್ಲದೇ ಅಪಘಾತದಲ್ಲಿ ಗಾಯಗೊಂಡವರಿಗೆ ಕೂಡಲೇ ಚಿಕಿತ್ಸೆ ದೊರೆತು ನೋವು, ನರಳಾಟ ಕಡಿಮೆಯಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಹೋರಾಟ ಮಾಡಿ ಆಂಬುಲೆನ್ಸ್ ಪಡೆದಿದ್ದರು
ತುಮರಿ ಸುತ್ತಮುತ್ತ ಸುಮಾರು ೨೦ ಸಾವಿರ ಜನಸಂಖ್ಯೆ ಇದೆ. ಇಷ್ಟು ಜನಕ್ಕೆ ಇದ್ದದ್ದು ಒಂದೇ ಒಂದು ಆಂಬುಲೆನ್ಸ್. ತುರ್ತು ಸಂದರ್ಭದಲ್ಲಿ ಕಾರ್ಗಲ್‌ನಿಂದ ಆಂಬುಲೆನ್ಸ್ ಬರಬೇಕಾಗಿತ್ತು.ಶರಾವತಿ ಹಿನ್ನೀರಿನ ಜನರು ಸಾಲು ಸಾಲು ಪ್ರತಿಭಟನೆಗಳನ್ನು ನಡೆಸಿ ಒಂದು ಆಂಬುಲೆನ್ಸ್ ಮಂಜೂರು ಮಾಡಿಸಿಕೊಂಡಿದ್ದರು. ಆದರೆ ಇದ್ದ ಒಂದು ಆಂಬುಲೆನ್ಸ್ ಕೂಡ ಕಾಣೆಯಾಗಿದೆ.
ಕಳೆದೊಂದು ತಿಂಗಳಿನಿಂದ ತುಮರಿಯಿಂದ 108 ಆಂಬುಲೆನ್ಸ್ ಕಣ್ಮರೆಯಾಗಿದೆ. ರಿಪೇರಿಯ ನೆಪವೊಡ್ಡಿ ತುಮರಿಯಿಂದ ತೆರಳಿದ ಆಂಬುಲೆನ್ಸ್ ಮತ್ತೆ ಹಿಂತಿರುಗಿಲ್ಲ. ಬದಲಿ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡರೂ ಅಧಿಕಾರಿಗಳು ಕಿಮ್ಮತ್ತು ನೀಡುತ್ತಿಲ್ಲ. ಜನಪ್ರತಿನಿಧಿಗಳು ಕಂಡು ಕಾಣದಂತಿದ್ದಾರೆ. ತುರ್ತಾಗಿ ಆಂಬುಲೆನ್ಸ್ ಬೇಕು ಎಂದು 108ಕ್ಕೆ ಕರೆ ಮಾಡಿದರೆ ಕಾರ್ಗಲ್‌ನಿಂದ ಆಂಬುಲೆನ್ಸ್ ಬರಬೇಕು. ಅದು ಇಲ್ಲದಿದ್ದರೆ ಈ ಭಾಗದ ಜನರು ಸಾವು ಬದುಕಿನ ನಡುವೆ ಹೋರಾಟ ನಡೆಸಿಕೊಂಡು ಸಾಗರ ತಲುಪಬೇಕಿದೆ. ಇದೇ ಕಾರಣಕ್ಕೆ ಕಳೆದ ರಾತ್ರಿ ಹಸುಗೂಸು ಕಣ್ಣು ಬಿಡುವ ಮೊದಲೇ ಇಹಲೋಕ ತ್ಯಜಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
''ಆಂಬುಲೆನ್ಸ್‌ಗಾಗಿ ಶುಕ್ರವಾರ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಹೋರಾಟ ಮಾಡುತ್ತೇವೆ. ಇಷ್ಟೆಲ್ಲಾ ಆದರೂ ಜನಪ್ರತಿನಿಧಿಗಳು,ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಶರಾವತಿ ಹಿನ್ನೀರಿನ ಜನರ ಬವಣೆಗೆ ಆದಷ್ಟು ಬೇಗ ಮುಕ್ತಿ ಸಿಗಬೇಕು. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ 108 ಆಂಬುಲೆನ್ಸ್‌ಗೆ ಪರ್ಯಾಯ ವ್ಯವಸ್ಥೆ ಮಾಡುವತ್ತ ಯೋಚಿಸಬೇಕಿದೆ.
-ಜಿ,ಟಿ ಸತ್ಯನಾರಾಯಣ್,ಮಾಜಿ ಅಧ್ಯಕ್ಷರು,ತುಮರಿ ಗ್ರಾ.ಪಂ
ವಿವರ ನೀಡುವಂತೆ ನೋಟೀಸ್
ಅವಧಿ ಪೂರ್ವವಾಗಿ ಮಗು ಜನನವಾಗಿ ಮಗು ತೀರಿಕೊಂಡಿದೆ. 108 ವಾಹನ ರಿಪೇರಿ ಸಮಸ್ಯೆಯಿಂದ 2 ವಾರಗಳಿಂದ ಇರಲಿಲ್ಲ ಎಂದು ತಿಳಿದು ಬಂದಿದೆ. 108 ಅಂಬ್ಯುಲೆನ್ಸ್ ರಿಪ್ಲೇಸ್ ಕೊಡದೇ ರಿಪೇರಿಗೆ ತೆಗೆದುಕೊಂಡು ಹೋಗಿದ್ದಾರೆ. ಇದು ಏಜೆನ್ಸಿಯವರ ವೈಫಲ್ಯ. ಈ ಪ್ರಕರಣ ಸಂಬಂಧ ಏಜೆನ್ಸಿಯವರಿಗೆ ವಿವರ ನೀಡುವಂತೆ ಶೋಕಾಸ್ ನೋಟೀಸ್ ನೀಡಲಾಗುತ್ತದೆ. ಅಲ್ಲದೇ 4 ವಾರದೊಳಗೆ ತುಮರಿ ಭಾಗಕ್ಕೆ ಆರೋಗ್ಯ ಇಲಾಖೆಯಿಂದ ಮತ್ತೊಂದು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುವುದು.
-ಡಾ.ರಾಜೇಶ್ ಸುರಗೀಹಳ್ಳಿ,ಜಿಲ್ಲಾ ಆರೋಗ್ಯಾಧಿಕಾರಿ,ಶಿವಮೊಗ್ಗ