ಶಿವಸೇನೆ-ಎಂಇಎಸ್ ಕಾರ್ಯಕರ್ತರಿಂದ ಕನ್ನಡ ಧ್ವಜಕ್ಕೆ ಬೆಂಕಿ ವಿಚಾರ: ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕಾರ
ಬೆಳಗಾವಿ, ಡಿ.16: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿ ಅಪಮಾನ ಮಾಡಿದ ಘಟನೆ ಗುರುವಾರ ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿತು. ಇದೇ ವೇಳೆ ಜೆಡಿಎಸ್ ಸದಸ್ಯ ಡಾ.ಕೆ.ಅನ್ನದಾನಿ ಮಂಡಿಸಿದ ಖಂಡನಾ ನಿರ್ಣಯಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಒಕ್ಕೊರಲ ಆಗ್ರಹದಿಂದ ಅಂಗೀಕಾರ ಲಭಿಸಿತು.
ಇದಕ್ಕೂ ಮುನ್ನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಅನ್ನದಾನಿ, ನನ್ನ ತಾಯಿ ಕನ್ನಡಾಂಬೆ, ಕನ್ನಡ ಬಾವುಟಕ್ಕೆ ಬೆಂಕಿ ಹಾಕಿದ್ದು ಇಂತಹ ಅಪಮಾನವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ನಮ್ಮ ಬಾವುಟಕ್ಕೆ ಬೆಂಕಿ ಹಾಕುವ ಮೂಲಕ ಕನ್ನಡಿಗರನ್ನು ಕೆಣಕುವ ಕೆಲಸವನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಮಾಡುತ್ತಿದೆ ಎಂದು ಕಿಡಿಗಾರಿದರು.
ರಾಜ್ಯದಲ್ಲಿ ಕನ್ನಡಿಗರ ಆಕ್ರೋಶ ಭುಗಿಲೆದ್ದಿದ್ದು, ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಪುಂಡರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಹೀಗೆ ಬೇರೆಯವರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಡಿನ ಸ್ವಾಭಿಮಾನದ ಸಂಕೇತವಾದ ಕನ್ನಡ ಧ್ವಜವನ್ನು ಸುಡುವ ಮೂಲಕ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಕೂಡಲೆ ಬಂಧಿಸಿ, ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಮಹಾರಾಷ್ಟ್ರ ಸರಕಾರಕ್ಕೆ ಖಂಡನಾ ನಿರ್ಣಯವನ್ನು ಕಳುಹಿಸಿಕೊಡಲಾಗುವುದು. ಜೊತೆಗೆ, ಅಲ್ಲಿನ ಅಧಿಕಾರಿಗಳ ಜೊತೆಯೂ ಚರ್ಚೆ ನಡೆಸಿ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಗಮನ ಹರಿಸುವಂತೆ ಕೋರಲಾಗುವುದು ಎಂದು ಸರಕಾರದ ಪರವಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಯಾವುದೆ ಸರಕಾರವಿರಲಿ, ನೆಲ, ಜಲ, ಭಾಷೆ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಈಗಾಗಲೆ ಗಡಿ ವಿಚಾರ ತೀರ್ಮಾನ ಆಗಿದೆ. ಮಹಾರಾಷ್ಟ್ರ, ಶಿವಸೇನೆ, ಎಂಇಎಸ್ ಪದೇ ಪದೇ ಈ ವಿಚಾರವನ್ನು ಇಟ್ಟುಕೊಂಡು ಗಡಿ ಭಾಗದಲ್ಲಿ ಪುಂಡಾಟಿಕೆ ಮಾಡುತ್ತಿದೆ. ಮಹಾರಾಷ್ಟ್ರದ ನೆಲದಲ್ಲಿ ಕಿಡಿಗೇಡಿಗಳು ಕನ್ನಡ ಧ್ವಜ ಸುಟ್ಟಿದ್ದಾರೆ. ಅಲ್ಲಿನ ಸರಕಾರ ಅವರಿಗೆ ಶಿಕ್ಷೆ ಕೊಡಬೇಕು. ಯಾರೋ ಒಬ್ಬರು ಮಾಡುವ ಇಂತಹ ದುಷ್ಕøತ್ಯಗಳಿಂದ ಎರಡು ಭಾಷಿಕರ ನಡುವಿನ ಸಾಮರಸ್ಯ ಹಾಳಾಗುತ್ತದೆ. ಅನ್ನದಾನಿ ಮಂಡಿಸಿರುವ ಖಂಡನಾ ನಿರ್ಣಯವನ್ನು ಅಲ್ಲಿನ ಸರಕಾರಕ್ಕೆ ಕಳುಹಿಸಿಕೊಡುತ್ತೇವೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಇಂತಹ ಕೃತ್ಯ ಎಸಗಿರುವವರು ಮತಿಹೀನರು. ನಾವೆಲ್ಲರೂ ಭಾರತೀಯರು, ನಾವು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡವರು. ಭಾರತದ ಪ್ರಜೆಗಳಾದ ನಾವು ಭಾಷಾವಾರು ಪ್ರಾಂತ್ಯಗಳನ್ನು ಮಾಡಿಕೊಂಡಿದ್ದೇವೆ ಎಂದರು.
ಈ ಕನ್ನಡದ ಬಾವುಟದ ಬಗ್ಗೆ ನಮಗೆ ಭಾವನಾತ್ಮಕ ಸಂಬಂಧವಿದೆ. ಮಹಾರಾಷ್ಟ್ರದ ಪುಂಡರು ಅದನ್ನು ಸುಟ್ಟು ಹಾಕಿದ್ದಾರೆ. ಆದುದರಿಂದ, ವಿಧಾನಸಭೆಯಲ್ಲಿ ಒಂದು ಖಂಡನಾ ನಿರ್ಣಯ ಮಂಡಿಸಲಿ, ನಾವು ಬೆಂಬಲ ಕೊಡುತ್ತೇವೆ. ಆರೋಪಿಗಳಿಗೆ ಶಿಕ್ಷೆ ಕೊಡಿ ಎಂದು ಮಹಾರಾಷ್ಟ್ರ ಸರಕಾರಕ್ಕೆ ಹೇಳಬೇಕು. ಖಂಡನಾ ನಿರ್ಣಯವನ್ನು ಮಹಾರಾಷ್ಟ್ರ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡೋಣ. ಇಂತಹ ಘಟನೆಗಳಿಂದ ರಾಜ್ಯ ರಾಜ್ಯಗಳ ನಡುವೆ ದ್ವೇಷ, ಅಸಹನೆ ಮೂಡುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಘಟನೆಯ ಹಿನ್ನೆಲೆ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನಕ್ಕೆ ಪರ್ಯಾಯವಾಗಿ ಇತ್ತೀಚೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂ.ಇ.ಎಸ್) ಕಾರ್ಯಕರ್ತರು ಹಮ್ಮಿಕೊಂಡಿದ್ದ ಮಹಾಮೇಳಾವ್‍ನಲ್ಲಿ ಬೆಳಗಾವಿ, ನಿಪ್ಪಾಣಿ ಸೇರಿದಂತೆ ಇನ್ನಿತರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ದೀಪಕ್ ದಳವಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಇದರಿಂದ ಕೆರಳಿದ ಕನ್ನಡ ಪರ ಸಂಘಟನೆಗಳ ಮುಖಂಡರು ಅವರ ಮುಖಕ್ಕೆ ಮಸಿ ಎರಚಿದ್ದರು.
ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪ್ರತಿಭಟನೆ ನಡೆಸಿದ ಶಿವಸೇನೆ ಕಾರ್ಯಕರ್ತರು, ಕನ್ನಡಪರ ಸಂಘಟನೆಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದಲ್ಲದೆ, ಛತ್ರಪತಿ ಶಿವಾಜಿ ಮಹಾರಾಜರಿಗೆ ಜೈಕಾರಗಳನ್ನು ಹಾಕಿಕೊಂಡು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ಪುಂಡಾಟಿಕೆ ಮೆರೆದಿದ್ದರು. ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡಿಗರನ್ನು ಕೆರಳಿಸಿದೆ.
ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜ ಸುಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕೆಲ ಕಿಡಿಗೇಡಿಗಳು, ‘ಈಗ ಕನ್ನಡ ಧ್ವಜಕ್ಕೆ ಬೆಂಕಿ ಇಡಲಾಗಿದೆ, ಮುಂದೆ ಕನ್ನಡಿಗರ ಮನೆಗೆ ಬೆಂಕಿ ಇಡುತ್ತೇವೆ’ ಎಂದು ಕನ್ನಡಿಗರನ್ನು ಕೆರಳಿಸುವ ಪ್ರಯತ್ನ ನಡೆಸಿದ್ದಾರೆ.
ಮುಖಕ್ಕೆ ಮಸಿ ಬಳಿದವರ ಬಂಧನ: ಎಂಇಎಸ್ ಮುಖಂಡ ದೀಪಕ್ ದಳವಿಗೆ ಘೇರಾವ್ ಹಾಕಿ ಮುಖಕ್ಕೆ ಮಸಿ ಬಳಿದ ಘಟನೆ ಕುರಿತು ಪ್ರತಿಭಟನಾ ರ್ಯಾಲಿ ನಡೆಸಿದ ಎಂಇಎಸ್ ಕಾರ್ಯಕರ್ತರು ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಕನ್ನಡಪರ ಹೋರಾಟಗಾರ ಸಂಪತ್ ಕುಮಾರ್ ಹಾಗೂ ಇನ್ನಿಬ್ಬರ ವಿರುದ್ಧ ಕೊಲೆ ಯತ್ನ ದೂರು ದಾಖಲಿಸಿದ್ದರು. ಪೊಲೀಸರು ಇವರನ್ನು ಬಂಧಿಸಿದ್ದು, ಕನ್ನಡಪರ ಹೋರಾಟಗಾರರ ಬಿಡುಗಡೆಗೆ ಗಣ್ಯರು ಆಗ್ರಹಿಸಿದ್ದಾರೆ.
ಕನ್ನಡ ಬಾವುಟ ಸುಟ್ಟಿದ್ದು ಸರಿಯಲ್ಲ. ಗಡಿಯಲ್ಲಿ ಶಾಂತಿಯನ್ನು ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಆರಗ ಜ್ಞಾನೇಂದ್ರ, ಗೃಹ ಸಚಿವ
ಕನ್ನಡಿಗರೆಲ್ಲರ ಅಧಿಕೃತ ಬೆಂಬಲದ ಠಸ್ಸೆ ಬಿದ್ದಿರುವ ಕನ್ನಡ ಬಾವುಟ ನಮ್ಮ ಘನತೆ, ಗೌರವ ಮತ್ತು ಅಸ್ಮಿತೆಯ ಸಂಕೇತ. ಕನ್ನಡ ಧ್ವಜಕ್ಕೆ ಮಾಡುವ ಅವಮಾನ ಕನ್ನಡಿಗರಿಗೆ ಮಾತ್ರವಲ್ಲ, ಕರ್ನಾಟಕಕ್ಕೆ ಮಾಡುವ ಅವಮಾನ. ಕನ್ನಡ ಧ್ವಜವನ್ನು ಸುಟ್ಟು ಅವಮಾನಿಸಿದ ಕನ್ನಡ ದ್ರೋಹಿ ದುರುಳರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ತಕ್ಷಣ ಬಂಧಿಸಿ, ಸೂಕ್ತ ಕ್ರಮಕೈಗೊಳ್ಳಬೇಕು.
ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ
ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದಲ್ಲಿ ನಾಡಧ್ವಜ ಸುಟ್ಟ ಘಟನೆ ಖಂಡನೀಯ. ನಮ್ಮ ನಾಡು, ನುಡಿ, ಭಾμÉ ನಮ್ಮ ಉಸಿರಾಟದ ಒಂದು ಭಾಗ. ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ಕರ್ನಾಟಕದಲ್ಲಿ ಮರಾಠಿ-ಕನ್ನಡ ಭಾಷಿಕರಿಬ್ಬರೂ ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದೆವೆ. ಇದಕ್ಕೆ ಹುಳಿ ಹಿಂಡುವ ಕೆಲಸ ಮಾಡಬಾರದು.
ಗೋವಿಂದ ಕಾರಜೋಳ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ
ಯಾರಪ್ಪಂದೆನೈತಿ ಬೆಳಗಾವಿ ನಮ್ದೈತಿ. ಇತ್ತೀಚಿನ ಎಂಇಎಸ್ ಪುಂಡಾಟಿಕೆ ದಿನೇ ದಿನೇ ವಿಕೋಪಕ್ಕೆ ಹೋಗುತ್ತಿದ್ದು ಇವರ ರಾಜಕೀಯ ಮೇಲಾಟಕ್ಕೆ ಅಮಾಯಕ ಕನ್ನಡಿಗರನ್ನು ಬಲಿತೆಗೆದುಕೊಳ್ಳುತ್ತಿರುವುದು ದುರ್ದೈವದ ಸಂಗತಿಯಾಗಿದ್ದು, ಈ ಹಿಂದೆ ರಾಜ್ಯೋತ್ಸವದ ದಿನದಂದು ಕರಾಳದಿನವಾಗಿ ಆಚರಿಸಲು ಮಹಾರಾಷ್ಟ್ರ ಸರಕಾರವೇ ತೀರ್ಮಾನ ತೆಗೆದುಕೊಂಡಿತ್ತು. ಪ್ರಸ್ತುತ ನಮ್ಮ ಸರಕಾರವೆ ಬೆಳಗಾವಿಯಲ್ಲಿರುವುದರಿಂದ ನಾಡಧ್ವಜವಾಗಿ ಕನ್ನಡ ಬಾವುಟವೊಂದೆ ಇರಬೇಕೆಂಬ ಕಾನೂನನ್ನು ವಿಧಾನಸಭೆಯಲ್ಲಿ ತರುವುದೊಂದೆ ಪರಿಹಾರ, ಈ ನಿಟ್ಟಿನಲ್ಲಿ ಸರಕಾರ ದೃಢ ನಿರ್ಧಾರ ತೆಗೆದುಕೊಳ್ಳಲಿ.
- ಜಿ.ಸಿ.ಚಂದ್ರಶೇಖರ್, ರಾಜ್ಯಸಭಾ ಸದಸ್ಯ