ಮುಂದಿನ ಶೈಕ್ಷಣಿಕ ವರ್ಷದಿಂದ ಸೀಮಿತ ಸಂಖ್ಯೆಯ ಆಯ್ದ ಶಾಲೆಗಳಲ್ಲಿ ಎನ್‍ಇಪಿ ಜಾರಿ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Update: 2021-12-16 12:22 GMT

ಬೆಳಗಾವಿ ಸುವರ್ಣವಿಧಾನಸೌಧ, ಡಿ.15: ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕೆಲವು ಪ್ರದೇಶಗಳಲ್ಲಿ ಸೀಮಿತ ಸಂಖ್ಯೆಯ ಆಯ್ದ ಶಾಲೆಗಳಲ್ಲಿ ಮಾತ್ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ)ಯನ್ನು ಜಾರಿ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಮಹಾಂತೇಶ್ ಕೌಜಲಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎನ್‍ಇಪಿ ಜಾರಿಗೊಳಿಸುವ ಸಂಬಂಧ ಹೊಸ ಪಠ್ಯ ಕ್ರಮವನ್ನು ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಆ ಬಳಿಕ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. 

2030ರೊಳಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಬೇಕೆಂಬ ನಿರ್ದೇಶನವಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹಿರಿಯ ಅಧಿಕಾರಿಗಳ ಜೊತೆ ನಾಲ್ಕೈದು ಸುತ್ತಿನ ಸಭೆ ನಡೆಸಿದ್ದೇವೆ. ಪೂರ್ವ ಪ್ರಾಥಮಿಕ ಶಿಕ್ಷಕಿಯರಿಗೆ ಟಾಟಾ ಸಂಸ್ಥೆ ತರಬೇತಿ ನೀಡುತ್ತಿದ್ದರೆ, ಶಿಕ್ಷಕರಿಗೂ ತರಬೇತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಅಧಿಕಾರಿಗಳ ಜೊತೆ ಉಪಸಮಿತಿಯು ಸಭೆ ನಡೆಸಿದೆ. ಶಿಕ್ಷಣ ತಜ್ಞರು ಹಲವು ಸಭೆಗಳನ್ನು ನಡೆಸಿ ರಾಜ್ಯ ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ರಾಜ್ಯ ಉನ್ನತ ಶಿಕ್ಷಣ ಪರಿಷತ್‍ನ ಅಂದಿನ ಉಪಾಧ್ಯಕ್ಷರಾಗಿದ್ದ ಎಸ್.ವಿ. ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ 15ಜನ ಸದಸ್ಯರುಳ್ಳ ಕಾರ್ಯಪಡೆಯನ್ನು ರಚಿಸಲಾಯಿತು. ಈ ಕಾರ್ಯಪಡೆಯು ಸರಕಾರಕ್ಕೆ ವರದಿ ಸಲ್ಲಿಸಿದ್ದು, ಸಮಿತಿಯ ವರದಿಯನ್ನು ಪರಿಶೀಲಿಸಿ ಹಂತ ಹಂತವಾಗಿ ಅನುಷ್ಠಾನ ಮಾಡುತ್ತೇವೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ರಚನಾತ್ಮಕ ರೂಪಾಂತರ, ಆಡಳಿತಾತ್ಮಕ ಬದಲಾವಣೆಗಳು, ಪಠ್ಯಕ್ರಮ ಸುಧಾರಣೆ ಆಧಾರದ ಮೇಲೆ ಸರಕಾರ ಕ್ರಮ ಕೈಗೊಂಡಿದೆ. ಶಿಕ್ಷಣ ನೀತಿಯ ಅನುಷ್ಠಾನ ರೂಪುರೇಷೆಯನ್ನು ವಿನ್ಯಾಸಗೊಳಿಸಲು ಕೋರ್ ಕಮಿಟಿಯನ್ನು ರಚಿಸಲಾಗಿತ್ತು. ಒಟ್ಟಾರೆ ರಾಜ್ಯ ಸರಕಾರ ಹಂತ-ಹಂತವಾಗಿ ಎನ್‍ಇಪಿ ಅನುಷ್ಠಾನಗೊಳಿಸಲಾಗುವುದು ಎಂದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಶಿವಾನಂದ ಕೌಜಲಗಿ, ರಾಜ್ಯದಲ್ಲಿ ಒಟ್ಟು 53,700 ಮಂದಿ ಶಿಕ್ಷಕರ ಕೊರತೆ ಇದೆ ಎಂದು ಸರಕಾರವೇ ಉತ್ತರ ನೀಡಿದ್ದು, ಸೂಕ್ತ ಪ್ರಮಾಣದ ಸಿಬ್ಬಂದಿ ಇಲ್ಲದೆಯೆ ತರಾತುರಿಯಲ್ಲಿ ಎನ್‍ಇಪಿ ಜಾರಿ ಸರಿಯಲ್ಲ. ಸಿಬ್ಬಂದಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News