×
Ad

ಶಶಿಕಲಾಗೆ ಜೈಲಿನಲ್ಲಿ ಆತಿಥ್ಯ: ಸೂಕ್ತ ನಿರ್ಧಾರ ಕೈಗೊಳ್ಳಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2021-12-16 18:34 IST

ಬೆಂಗಳೂರು, ಡಿ.16: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತ ಗೆಳತಿ ವಿ.ಕೆ.ಶಶಿಕಲಾಗೆ ಜೈಲಿನಲ್ಲಿದ್ದ ವೇಳೆ ಲಂಚ ಪಡೆದು ವಿಶೇಷ ಸೌಲಭ್ಯ ನೀಡಿದ ಆರೋಪಕ್ಕೆ ಸಿಲುಕಿರುವ ಪೊಲೀಸ್ ಅಧಿಕಾರಿ ವಿರುದ್ಧದ ತನಿಖೆಗೆ ಅನುಮತಿ ಕೋರಿ ಎಸಿಬಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ ಎರಡು ವಾರದಲ್ಲಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಈ ಕುರಿತು ನಗರದ ಕೆ.ಎಸ್.ಗೀತಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ಆರೋಪಿ ಅಧಿಕಾರಿ ವಿರುದ್ಧ ಪ್ರಾಸಿಕ್ಯೂಷನ್‍ಗಾಗಿ ಪೂರ್ವಾನುಮತಿ ಕೋರಿ ಎಸಿಬಿ ಸಲ್ಲಿಸಿರುವ ಮನವಿಯನ್ನು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಗೃಹ ಮಂತ್ರಿಗಳಿಗೆ ರವಾನಿಸಿದ್ದಾರೆ. 

ಸಹಿ ಬಾಕಿ ಇದೆ. ಈ ಕುರಿತು ಕ್ರಮ ಕೈಗೊಳ್ಳಲು 2 ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ವಾದ ಪರಿಗಣಿಸಿದ ಪೀಠ, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 19ರ ಅಡಿ ಪ್ರಾಸಿಕ್ಯೂಷನ್‍ಗೆ ಪೂರ್ವಾನುಮತಿ ನೀಡುವ ಸಂಬಂಧ ಗೃಹ ಇಲಾಖೆ 2 ವಾರಗಳಲ್ಲಿ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಗೃಹ ಇಲಾಖೆ ಕಾರ್ಯದರ್ಶಿ ಹಾಜರಾಗಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜನವರಿಗೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News