×
Ad

ಸಚಿವ ಬೈರತಿ ಬಸವರಾಜ ವಿರುದ್ಧ ಭೂಕಬಳಿಕೆ ಆರೋಪ: ಪರಿಷತ್ ನಲ್ಲಿ ಕಾಂಗ್ರೆಸ್ ಧರಣಿ ಅಂತ್ಯ

Update: 2021-12-16 18:41 IST

ಬೆಳಗಾವಿ, ಡಿ.16: ಭೂಕಬಳಿಕೆ ಆರೋಪ ಎದುರಿಸುತ್ತಿರುವ ಸಚಿವ ಬೈರತಿ ಬಸವರಾಜ ರಾಜೀನಾಮೆಗೆ ಆಗ್ರಹಿಸಿ ವಿಧಾನ ಪರಿಷತ್ತಿನಲ್ಲಿ ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷ ಹಿಂಪಡೆದಿದೆ.

ಗುರುವಾರ ಪರಿಷತ್ತಿನಲ್ಲಿ ಭೋಜನ ವಿರಾಮದ ಬಳಿಕ ಕಲಾಪ ಸಮಾವೇಶಗೊಂಡಾಗ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಕುರಿತು ಸುದೀರ್ಘ ಚರ್ಚೆ ನಡೆಸಬೇಕಿದೆ. ಜತೆಗೆ, ಜ್ವಲಂತ ಸಮಸ್ಯೆಗಳ ನಿವಾರಣೆಗೆ ಚರ್ಚಿಸಬೇಕಿದೆ. ಇದರಿಂದ ಧರಣಿ ಕೈಬಿಟ್ಟು ಕಲಾಪದಲ್ಲಿ ಪಾಲ್ಗೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯರಿಗೆ ಮನವಿ ಮಾಡಿದರು. ಆಗ ಕಾಂಗ್ರೆಸ್ ಸದಸ್ಯರು ಮನವಿಗೆ ಸ್ಪಂದಿಸಿ ಧರಣಿ ಕೈಬಿಟ್ಟರು.

ಇದಕ್ಕೂ ಮೊದಲು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸರಕಾರದ ವಿರುದ್ಧ ಮಾಡುವ ಟೀಕೆಯನ್ನು ನಾವು ಸ್ವಾಗತಿಸಿದ್ದೇವೆ. ಆದರೆ, ಪೀಠದ ತೀರ್ಮಾನಕ್ಕೆ ವಿರುದ್ಧವಾಗಿ ಹೋಗುವುದು ಸರಿಯಲ್ಲ. ಜತೆಗೆ, ನಾವೆಲ್ಲಾ ಶಾಶ್ವತವಲ್ಲ, ಪರಿಷತ್ ಶಾಶ್ವತ, ಪೀಠವನ್ನೇ ಪ್ರಶ್ನೆ ಮಾಡಿದರೆ ಹೇಗೆ? ಮುಖ್ಯ ನ್ಯಾಯಮೂರ್ತಿಗಳ ನಿರ್ಧಾರವನ್ನೇ ಪ್ರಶ್ನಿಸಿದಂತಾಗಲಿದೆ ಎಂದರು.

ಸಭಾಪತಿಗಳು ಕೂಡ ಮುಖ್ಯ ನ್ಯಾಯಮೂರ್ತಿ ಇದ್ದ ಹಾಗೆ, ನಿಮ್ಮ ತೀರ್ಮಾನ ಪ್ರಶ್ನಿಸಿದ್ದಾರೆ, ಹಾಗಾಗಿ ನಾವು ಕಾಂಗ್ರೆಸ್ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ನಾವು ನಿನ್ನೆ ಸದಸ್ಯರ ಅಮಾನತು ಘಟನೆಗೆ ವಿರೋಧಿಸಲಿದ್ದೇವೆ, ನಾನು ಕ್ರಮಕ್ಕೆ ಒತ್ತಡ ಹೇರಬಾರದಿತ್ತು, ಅದಕ್ಕೆ ವಿರುದ್ಧ ವಿದೆ ಅದನ್ನು ಒಪ್ಪಿಕೊಳ್ಳುತ್ತೇವೆ. ಈಗ ಸಭೆ ನಡೆಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು.

ಸಭಾಪತಿ ಬಸವರಾಜ ಹೊರಟ್ಟಿ, ಸಭಾಪತಿ ಕಚೇರಿಯಲ್ಲಿ ನಡೆದ ಸಭೆಯ ನಿರ್ಧಾರಕ್ಕೆ ಬದ್ದವಾಗುವಂತೆ ಸೂಚಿಸಿ ಗದ್ದಲಕ್ಕೆ ತೆರೆ ಎಳೆದರು. ಸಚಿವ ಬೈರತಿ ಬಸವರಾಜ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ನಿನ್ನೆಯಿಂದ ಧರಣಿ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News