ಮಡಿಕೇರಿ: ನಾಣಚ್ಚಿ ಗ್ರಾಮವನ್ನು ಕಾಡಿದ ಹುಲಿ ಕೊನೆಗೂ ಸೆರೆ
ಮಡಿಕೇರಿ ಡಿ.16 : ಪೊನ್ನಂಪೇಟೆಯ ಕೆ.ಬಾಡಗದ ನಾಣಚ್ಚಿ ಗ್ರಾಮವನ್ನು ಕಾಡಿದ್ದ ಹುಲಿ ಕೊನೆಗೂ ಸೆರೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸಾಕಾನೆಗಳ ಸಹಕಾರದೊಂದಿಗೆ ಹುಲಿಗೆ ಅರೆವಳಿಕೆ ನೀಡಿ ಸೆರೆ ಹಿಡಿದಿದ್ದಾರೆ.
ಗ್ರಾಮದಲ್ಲಿ ಸುಮಾರು 9 ಆಡುಗಳನ್ನು ಭಕ್ಷಿಸಿದ್ದ ಹುಲಿ ಹಸುಗಳ ಮೇಲೂ ದಾಳಿ ಮಾಡಿತ್ತು.
ಬುಧವಾರ ಹುಲಿ ಉಪಟಳ ಹೆಚ್ಚಾಗಿ ಅಂಗನವಾಡಿ ಸಮೀಪ ಗೋಚರಿಸಿದ ಕಾರಣ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿತ್ತು. ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಸ್ಥಳೀಯರು ಯಾವುದೇ ಕಾರಣಕ್ಕೂ ಹುಲಿಯನ್ನು ಕಾಡಿಗಟ್ಟಬಾರದು, ಬದಲಿಗೆ ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು.
ರಾತ್ರಿ ಹುಲಿ ಸೆರೆ ಕಷ್ಟ ಸಾಧ್ಯವಾದ ಕಾರಣ ಗುರುವಾರ ಕಾರ್ಯಾಚರಣೆ ನಡೆಸುವುದಾಗಿ ಭರವಸೆ ನೀಡಿದರು. ನಂತರ ಸೂಕ್ತ ಬಂದೋಬಸ್ತ್ ಕಲ್ಪಿಸಿದರು. ಗ್ರಾಮಸ್ಥರ ಒತ್ತಡಕ್ಕೆ ಮಣಿದ ಅರಣ್ಯ ಅಧಿಕಾರಿಗಳು ಇಂದು ತಿತಿಮತಿ ಮತ್ತಿಗೋಡು ಸಾಕಾನೆ ಶಿಬಿರದಿಂದ ಆನೆಗಳನ್ನು ಕರೆಯಿಸಿಕೊಂಡು ಕಾರ್ಯಾಚರಣೆ ನಡೆಸಿದರು. ಅರೆವಳಿಕೆ ನೀಡಿ ಕೊನೆಗೂ ಹುಲಿಯನ್ನು ಸೆರೆ ಹಿಡಿದ ಅರಣ್ಯ ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟರು.
ಹುಲಿ ಸೆರೆಯ ಕಾರ್ಯಾಚರಣೆಯಲ್ಲಿ ಪ್ರತಿ ಬಾರಿ ಮುಂಚೂಣಿಯಲ್ಲಿರುವ ಸಾಕಾನೆ ಅಭಿಮನ್ಯು ಈ ಬಾರಿಯೂ ಯಶಸ್ಸು ತಂದು ಕೊಡುವ ಮೂಲಕ ಅರಣ್ಯ ಇಲಾಖೆಯ ಮೆಚ್ಚುಗೆಗೆ ಪಾತ್ರನಾದ.