ಚಿಕ್ಕಮಗಳೂರು: ಟಿಪ್ಪರ್ ಲಾರಿ ಢಿಕ್ಕಿ; ಪಾದಚಾರಿ ಮೃತ್ಯು
ಚಿಕ್ಕಮಗಳೂರು, ಡಿ.16: ಅತೀ ವೇಗದಿಂದ ಬಂದ ಟಿಪ್ಪರ್ ಲಾರಿಯೊಂದಕ್ಕೆ ಅಮಾಯಕ ವ್ಯಕ್ತಿಯೊಬ್ಬ ಬಲಿಯಾದ ಘಟನೆ ಗುರುವಾರ ನಗರದ ಎನ್‍ಎಂಸಿ ವೃತ್ತದ ಬಳಿ ನಡೆದಿದೆ.
ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಎನ್‍ಎಂಸಿ ವೃತ್ತದ ಬಳಿ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅವಘಡದಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದ್ದು, ಲಾರಿ ಹಾಗೂ ಚಾಲಕನನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಗಲು ವೇಳೆ ಟಿಪ್ಪರ್ ಲಾರಿಗಳಿಗೆ ನಗರ ಪ್ರವೇಶ ನಿರ್ಬಂಧ ಇದ್ದರೂ ಪೊಲೀಸರ ನಿರ್ಲಕ್ಷ್ಯದಿಂದಾಗಿ ನಗರದಲ್ಲಿ ಟಿಪ್ಪರ್ ಲಾರಿಗಳ ಹಾವಳಿ ಹೆಚ್ಚಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ವೇಗವಾಗಿ ಬಂದ ಈ ಲಾರಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಢಿಕ್ಕಿ ಹೊಡೆದ ಬಳಿಕ ಬೈಕ್ ಹಾಗೂ ಟಾಟಾ ಏಸ್ ವಾಹನಕ್ಕೂ ಢಿಕ್ಕಿ ಹೊಡೆದು ವಾಹನ,ಬೈಕ್ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.
ಜಿಲ್ಲಾ ಪೊಲೀಸ್ ಇಲಾಖೆ ಸಾಮಾನ್ಯ ಜನರಿಗೊಂದು ಕಾನೂನು, ಬಲಾಢ್ಯರಿಗೊಂದು ಕಾನೂನು ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.