ಮಡಿಕೇರಿಯ ಪೇರೂರಿನಲ್ಲಿ ಪುರಾತನ ಕೆತ್ತನೆ ಕಲ್ಲುಗಳು ಪತ್ತೆ
ಮಡಿಕೇರಿ ಡಿ.16 : ಪೇರೂರಿನ ಈಶ್ವರ ಇಗ್ಗುತಪ್ಪ ಸನ್ನಿದಿಯ ಜೀರ್ಣೋದ್ಧಾರದ ಸಂದರ್ಭ ಪುರಾತನ ಈಶ್ವರನ ಕೆತ್ತನೆಯ ಕಲ್ಲುಗಳು ಪತ್ತೆಯಾಗಿವೆ.
ಮಡಿಕೇರಿ ತಾಲೂಕಿನ ಬಲ್ಲಮಾವಟಿಯ (ಬಲ್ಲತ್‍ನಾಡಿನ) ಪುರಾತನ ಇತಿಹಾಸ ಹೊಂದಿರುವ ಪೇರೂರಿನ ಈಶ್ವರ ಇಗ್ಗುತಪ್ಪ ನೆಲೆಯಲ್ಲಿ ದೇವಾಲಯ ಜೀರ್ಣೋದ್ಧಾರ ಕಾರ್ಯವು ಬ್ರಹ್ಮಶ್ರೀ ನಿಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಂತೆ ಕಳೆದ ಮೂರು ತಿಂಗಳಿಂದ ನಡೆಯುತ್ತಿದೆ.
ಗರ್ಭಗುಡಿಯ ಜೀರ್ಣೋದ್ಧಾರದ ಸಂದರ್ಭ ಭೂಮಿಯೊಳಗೆ ಮೂರು-ನಾಲ್ಕು ಶಿವನ ಕೆತ್ತನೆ ಸೇರಿದಂತೆ ಪುರಾತನ ಮೂರ್ತಿಗಳು ಪತ್ತೆಯಾಗಿವೆ ಎಂದು ಜೀರ್ಣೋದ್ಧಾರ ಸಮಿತಿಯ ಸಹ ಕಾರ್ಯದರ್ಶಿ ಅಪ್ಪಚ್ಚಿರ ನಂದಾ ಮುದ್ದಪ್ಪ ತಿಳಿಸಿದ್ದಾರೆ.
ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಅಧಿಕಾರಿಗಳು ದೇವಾಲಯದಲ್ಲಿ ದೊರೆತ ಪುರಾತನ ಕಲ್ಲುಗಳನ್ನು ಪರಿಶೀಲಿದ್ದಾರೆ.
ದೇವಾಲಯದ ದೇವತಕ್ಕರು ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಚ್ಚುರ ಬಿ.ತಮ್ಮಯ್ಯ ಅವರ ನೇತೃತ್ವದಲ್ಲಿ ನಡೆಯುವ ಸಮಿತಿ ಸಭೆಯ ಒಪ್ಪಿಗೆ ಪಡೆದು ದೇವಾಲಯದಲ್ಲಿ ದೊರೆತ ಪುರಾತನ ಕಲ್ಲುಗಳನ್ನು ಪುರಾತತ್ವ ಇಲಾಖೆಗೆ ನೀಡುವಂತೆ ತೀರ್ಮಾನಿಸಲಾಗುವುದೆಂದು ತಿಳಿಸಿದ್ದಾರೆ.