ಜಾನುವಾರು ಹತ್ಯೆ ನಿಷೇಧ: ಸೆಕ್ಷನ್ 5ರ ಜಾರಿಗೆ ಹೈಕೋರ್ಟ್ ಅನುಮತಿ ಕೋರಿದ ಸರಕಾರ
ಬೆಂಗಳೂರು, ಡಿ.16: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ, ಸಂರಕ್ಷಣಾ ವಿಧೇಯಕ-2020ರ ಸೆಕ್ಷನ್ 5 ಜಾರಿಗೊಳಿಸಲು ಅನುಮತಿ ನೀಡುವಂತೆ ಹೈಕೋರ್ಟ್‍ಗೆ ರಾಜ್ಯ ಸರಕಾರ ಮನವಿ ಮಾಡಿದೆ.
ಹತ್ಯೆಗಾಗಿ ಜಾನುವಾರುಗಳನ್ನು ಸಾಗಣೆ ಮಾಡುವುದನ್ನು ನಿರ್ಬಂಧಿಸುವ ಈ ನಿಯಮ ಜಾರಿಗೊಳಿಸಲು ಸರಕಾರ ಲಿಖಿತ ಮನವಿ ಸಲ್ಲಿಸಿದ್ದು, ಇದಕ್ಕೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಅದನ್ನು 3 ವಾರಗಳಲ್ಲಿ ದಾಖಲಿಸುವಂತೆ ಹೈಕೋರ್ಟ್ ಅರ್ಜಿದಾರರಿಗೆ ಸೂಚಿಸಿದೆ.
ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿರುವ ಸರಕಾರದ ಕ್ರಮ ಪ್ರಶ್ನಿಸಿ ನಗರದ ಸಾಮಾಜಿಕ ಕಾರ್ಯಕರ್ತ ಮೊಹಮದ್ ಆರೀಫ್ ಜಮೀಲ್ ಸೇರಿ 10 ಜನರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಪೀಠಕ್ಕೆ ಮನವಿ ಮಾಡಿ, ಕಾಯ್ದೆಯ ಸೆಕ್ಷನ್ 5ನ್ನು ನ್ಯಾಯಾಲಯದ ಅನುಮತಿ ಇಲ್ಲದೇ ಜಾರಿಗೊಳಿಸುವುದಿಲ್ಲ ಎಂದು ಸರಕಾರ ಈ ಮೊದಲು ಭರವಸೆ ನೀಡಿದೆ. ಹೀಗಾಗಿ, ನಿಯಮ ಜಾರಿಗೊಳಿಸಲು ಸಮ್ಮತಿಸುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸೆಕ್ಷನ್ 5ಕ್ಕೆ ನಿಯಮಗಳನ್ನು ರೂಪಿಸಲಾಗಿದೆಯೇ ಎಂದು ಪ್ರಶ್ನಿಸಿತು.
ಎಜಿ ಉತ್ತರಿಸಿ ಸುಗ್ರೀವಾಜ್ಞೆ ಇದೀಗ ಕಾಯ್ದೆಯಾಗಿದೆ. ಹಾಗೆಯೇ, ಸೆಕ್ಷನ್ 5ಕ್ಕೆ ಪೂರಕ ನಿಯಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಇದೇ ವೇಳೆ, ಅರ್ಜಿದಾರರ ಪರ ಮಾಜಿ ಅಡ್ವೊಕೇಟ್ ಜನರಲ್, ಹಿರಿಯ ನ್ಯಾಯವಾದಿ ಪೆÇ್ರ.ರವಿವರ್ಮ ಕುಮಾರ್ ಅವರು, ಇಂದು ಅರ್ಜಿಯ ಅಂತಿಮ ವಾದ ಆಲಿಸುವುದಾಗಿ ನ್ಯಾಯಾಲಯ ಹಿಂದಿನ ವಿಚಾರಣೆ ವೇಳೆ ತಿಳಿಸಿತ್ತು. ನ್ಯಾಯಲಯ ಸಮ್ಮತಿಸಿದರೆ ವಾದ ಮಂಡಿಸಲಾಗುವುದು. ಕಡಿಮೆ ಕಾಲಾವಕಾಶದಲ್ಲೇ ಅಂತಿಮ ವಾದ ಮಂಡಿಸಲಾಗುವುದು ಎಂದರು.
ಪ್ರತಿಕ್ರಿಯಿಸಿದ ಪೀಠ, ಅಂತಿಮ ವಾದವನ್ನು ಆಲಿಸೋಣ. ಮೊದಲು ಸೆಕ್ಷನ್ 5ನ್ನು ಜಾರಿಗೊಳಿಸಲು ಕೋರಿ ಸರಕಾರ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆಗಳಿದ್ದರೆ ಅದನ್ನು ಮೂರು ವಾರಗಳಲ್ಲಿ ದಾಖಲಿಸಿ. ನಂತರ ವಿಚಾರಣೆ ಮುಂದುವರೆಸೋಣ ಎಂದು ತಿಳಿಸಿ, ವಿಚಾರಣೆ ಮುಂದೂಡಿತು.
ಸೆಕ್ಷನ್ 5ರಲ್ಲಿ ಏನಿದೆ?: ಯಾವುದೇ ಒಬ್ಬ ವ್ಯಕ್ತಿ ಯಾವುದೇ ಜಾನುವಾರನ್ನು ರಾಜ್ಯದೊಳಗಿನ ಒಂದು ಸ್ಥಳದಿಂದ ರಾಜ್ಯದೊಳಗಿನ ಮತ್ತೊಂದು ಸ್ಥಳಕ್ಕೆ ಹತ್ಯೆ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡತಕ್ಕದ್ದಲ್ಲ ಅಥವಾ ಸಾಗಾಣಿಕೆಗೆ ಕೊಡತಕ್ಕದ್ದಲ್ಲ ಅಥವಾ ಯಾವುದೇ ರೀತಿಯಲ್ಲೂ ಸಾಗಿಸುವಂತೆ ಮಾಡತಕ್ಕದ್ದಲ್ಲ.