ಮಳೆ ಹಾನಿಗೀಡಾದ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಆದ್ಯತೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Update: 2021-12-16 17:38 GMT

ಬೆಳಗಾವಿ ಸುವರ್ಣವಿಧಾನಸೌಧ, ಡಿ. 16: ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಹಾನಿಗೀಡಾದ ಶಾಲಾ ಕೊಠಡಿಗಳ ದುರಸ್ತಿ ಹಾಗೂ ಅಗತ್ಯವಿದ್ದರೆ ಪುನರ್ ನಿರ್ಮಾಣಕ್ಕೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪುಟ್ಟರಂಗಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿಶೇಷ ಮಳೆಯ ಕಾರಣ ರಾಜ್ಯಾದ್ಯಂತ ಶಾಲಾ ಕೊಠಡಿಗಳಿಗೆ ತೀವ್ರ ಹಾನಿಯಾಗಿರುವುದು ಸರಕಾರದ ಗಮನಕ್ಕೆ ಬಂದಿದೆ.

ಹಾನಿಯಾದ ಶಾಲಾ ಕೊಠಡಿಗಳನ್ನು ಎ, ಬಿ, ಸಿ ಎಂದು ಮೂರು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಅನುದಾನ ಒದಗಿಸಿ ದುರಸ್ತಿಗೆ ಕ್ರಮವಹಿಸಲಾಗುವುದು. ಅಲ್ಲದೆ, ಈ ಸಂಬಂಧ ಸಮೀಕ್ಷೆಯನ್ನು ಮಾಡಲಾಗಿದೆ. ಹಣಕಾಸಿನ ಲಭ್ಯತೆಯನ್ನು ಆಧರಿಸಿ ಕೊಠಡಿಗಳ ದುರಸ್ತಿಗೆ ಕ್ರಮ ವಹಿಸಲಾಗುವುದು ಎಂದರು.

ಆರಂಭಕ್ಕೆ ಮಾತನಾಡಿದ ಪುಟ್ಟರಂಗಶೆಟ್ಟಿ, ಚಾಮರಾಜನಗರ ಜಿಲ್ಲೆಯಲ್ಲಿ ಜೇಡಿಮಣ್ಣಿನ ಪ್ರದೇಶವಾಗಿದ್ದು, ಇರುವುದರಿಂದ ಶಾಲಾಕೊಠಡಿ ನಿರ್ಮಾಣಕ್ಕೆ ನಿಗದಿಯಾದ ಅನುದಾನ ಸಾಕಾಗುವುದಿಲ್ಲ. ತಾಂತ್ರಿಕವಾಗಿ ಪರಿಶೀಲಿಸಿ ಹೆಚ್ಚಿನ ಮೊತ್ತವನ್ನು ನಿಗದಿಪಡಿಸಬೇಕು ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ನಾಗೇಶ್, ಚಾಮರಾಜನಗರ ಜಿಲ್ಲೆಗೆ ಇಂಜನಿಯರ್ ತಂಡ ಕಳುಹಿಸಿ ಮಣ್ಣಿನ ಗುಣ ಪರೀಕ್ಷಿಸಿ ಹೆಚ್ಚುವರಿ ಅನುದಾನ ಒದಗಿಸಲು ಕ್ರಮವಹಿಸಲಾಗುವುದು. ಹೆಚ್ಚುವರಿ ಅನುದಾನವನ್ನು ಜಿ.ಪಂ.ಹಾಗೂ ಉದ್ಯೋಗ ಖಾತರಿ ಯೋಜನೆಯ ಅನುದಾನ ಬಳಕೆ ಮಾಡಬಹುದಾಗಿದೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News