ಲಖಿಂಪುರ ಖೇರಿ ಅವಘಡ: ರೈತರ ಜೀವ ಅದೆಷ್ಟು ಅಗ್ಗ!

Update: 2021-12-17 06:04 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರೈತರು ತಮ್ಮ ಹೋರಾಟವನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ರೈತರ ಬೇಡಿಕೆಯಂತೆ ಕಾಯ್ದೆಗಳನ್ನು ಸರಕಾರ ಹಿಂದೆಗೆದುಕೊಂಡಿದೆ. ಇದೇ ಸಂದರ್ಭದಲ್ಲಿ ಬೆಂಬಲ ಬೆಲೆಯೂ ಸೇರಿದಂತೆ ರೈತರ ಹಲವು ಬೇಡಿಕೆಗಳು ಈಡೇರಲು ಬಾಕಿಯಿದೆ. ಹಾಗೆಯೇ ರೈತರ ಹೋರಾಟದ ಸಂದರ್ಭದಲ್ಲಿ ಸಂಭವಿಸಿದ ಸಾವು ನೋವುಗಳಿಗೆ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ. ಆರಂಭದಲ್ಲಿ ಸರಕಾರ ‘ರೈತರ ಸಾವಿನ ಬಗ್ಗೆ ನಮ್ಮಲ್ಲಿ ಯಾವುದೇ ಅಂಕಿಅಂಶ ಇಲ್ಲ’ ಎಂದಿತು. ರೈತ ಮುಖಂಡರು ಮೃತರ ಅಂಕಿಅಂಶಗಳನ್ನು ನೀಡಿದ ಬೆನ್ನಿಗೇ ‘ಪೊಲೀಸ್ ಕಾರ್ಯಾಚರಣೆಯಲ್ಲಿ ಯಾವುದೇ ರೈತರು ಮೃತಪಡದೇ ಇದ್ದುದರಿಂದ, ಮೃತರಿಗೆ ಪರಿಹಾರ ನೀಡುವುದು ನಮ್ಮ ಹೊಣೆಗಾರಿಕೆಯಲ್ಲ’ ಎಂಬ ಅರ್ಥದಲ್ಲಿ ಕೇಂದ್ರ ಸಚಿವರು ಮಾತನಾಡಿದರು. ಸುಮಾರು ಒಂದು ವರ್ಷಗಳ ಕಾಲ ರೈತರನ್ನು ಬೀದಿಯಲ್ಲಿ ನಿಲ್ಲಿಸಿ, ಅವರನ್ನು ಉಗ್ರರು ಎಂಬಿತ್ಯಾದಿಯಾಗಿ ಅವಮಾನಿಸಿ, ಪೊಲೀಸರಿಂದ ಪ್ರತಿಭಟನೆಯನ್ನು ದಮನಿಸಲು ಯತ್ನಿಸಿರುವುದು ಯಾರು ಎನ್ನುವುದು ಇಡೀ ವಿಶ್ವಕ್ಕೆ ತಿಳಿದ ವಿಚಾರ. ರೈತರು ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎನ್ನುವುದು ಮನದಟ್ಟಾದ ಬಳಿಕ ಸರಕಾರ ಕಾಯ್ದೆಯನ್ನು ಹಿಂದೆಗೆದುಕೊಂಡಿತು. ಈ ನಿರ್ಧಾರವನ್ನು ಆರಂಭದಲ್ಲೇ ತೆಗೆದುಕೊಂಡಿದ್ದಿದ್ದರೆ ನೂರಾರು ರೈತರ ಪ್ರಾಣ ಉಳಿಯುತ್ತಿತ್ತು. ಆದುದರಿಂದ ರೈತರ ಸಾವಿನ ಹೊಣೆ ಹೊತ್ತು ಸರಕಾರ, ಅವರಿಗೆ ಸೂಕ್ತ ಪರಿಹಾರ ನೀಡುವವರೆಗೂ ಹೋರಾಟ ತನ್ನ ಗುರಿ ತಲುಪುವುದಿಲ್ಲ.

 ಸರಕಾರ ರೈತರ ಸಾವನ್ನು ಎಷ್ಟು ಹಗುರವಾಗಿ ತೆಗೆದುಕೊಂಡಿದೆ ಎನ್ನುವುದಕ್ಕೆ ಲಖಿಂಪುರ ಖೇರಿ ಅವಘಡ ಪ್ರಕರಣ ಉದಾಹರಣೆ. ಕೇಂದ್ರದ ಸಹಾಯಕ ಗೃಹ ಸಚಿವರ ಪುತ್ರ ಲಖಿಂಪುರದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿದ. ಆ ಬಳಿಕ ‘ನಾನು ಕಾರಿನಲ್ಲಿ ಇರಲೇ ಇಲ್ಲ’ ಎಂದೂ ಹೇಳಿಕೆ ನೀಡಿದ. ಪುತ್ರನ ರಕ್ಷಣೆಗೆ ಸ್ವತಃ ಕೇಂದ್ರ ಸಹಾಯಕ ಗೃಹ ಸಚಿವರೇ ನಿಂತರು. ಪೊಲೀಸರೇ ಸಾಕ್ಷ ನಾಶಕ್ಕಿಳಿದರು. ಆರೋಪಿ ಸಚಿವರ ಪುತ್ರನಾಗಿರುವಾಗ, ಅವರ ಕೈಕೆಳಗೆ ಕಾರ್ಯನಿರ್ವಹಿಸುವ ಪೊಲೀಸರು ತನಿಖೆಗೆ ನ್ಯಾಯ ನೀಡಲು ಸಾಧ್ಯವೇ? ಕೇಂದ್ರ ಸರಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ, ತಕ್ಷಣ ಸಹಾಯಕ ಗೃಹ ಸಚಿವರಿಂದ ರಾಜೀನಾಮೆ ಪಡೆದು ತನಿಖೆಯ ದಾರಿಯನ್ನು ಸುಗಮಗೊಳಿಸುತ್ತಿತ್ತು. ಒಂದು ವೇಳೆ ಆಶಿಶ್ ಮಿಶ್ರಾ ನಿರಪರಾಧಿ ಎಂದು ಸಾಬೀತಾದರೆ, ಬಳಿಕ ಅವರನ್ನು ಆ ಸ್ಥಾನಕ್ಕೆ ಮರುನೇಮಕ ಮಾಡಬಹುದಿತ್ತು. ಪೊಲೀಸರ ತನಿಖೆ ಎಷ್ಟು ಕಳಪೆಯಾಗಿತ್ತು ಎಂದರೆ, ನ್ಯಾಯಾಲಯವೇ ‘ನೀವು ಆರೋಪಿಯನ್ನು ರಕ್ಷಿಸುವುದಕ್ಕಾಗಿ ಸಾಕ್ಷ ಸಂಗ್ರಹಿಸುತ್ತಿದ್ದೀರಿ’ ಎಂದು ಛೀಮಾರಿ ಹಾಕಿತು. ಬಳಿಕ ವಿಶೇಷ ತನಿಖಾ ತಂಡದ ಮೇಲೆ ಕಣ್ಗಾವಲಿಟ್ಟಿತು. ಇದೀಗ ವರದಿ ಹೊರ ಬಿದ್ದಿದೆ. ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಕಾರು ಅವಘಡ ಉದ್ದೇಶಪೂರ್ವಕವಾಗಿತ್ತು ಎಂದು ಸಿಟ್ ತನಿಖೆ ತಿಳಿಸಿದೆ. ರೈತರ ಹತ್ಯೆಗೆ ‘ಯೋಜಿತ ಪಿತೂರಿ’ ಇದು ಎಂದು ಸಿಟ್ ತಿಳಿಸಿದರೆ ಈ ಪಿತೂರಿಯ ಹಿಂದೆ ಸರಕಾರವೂ ಭಾಗಿಯಾದಂತಾಗಲಿಲ್ಲವೇ? ಈ ಪಿತೂರಿಯ ಮುಖ್ಯ ಆರೋಪಿ ಸಹಾಯಕ ಗೃಹ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ. ಕೊನೆಯವರೆಗೂ ತನ್ನ ಪುತ್ರನನ್ನು ಸಮರ್ಥಿಸಿಕೊಂಡಿದ್ದ ಅಜಯ್ ಮಿಶ್ರಾ ಕೂಡ ಪರೋಕ್ಷವಾಗಿ ಆರೋಪಿಯೇ ಆಗಿದ್ದಾರೆ.

ತನ್ನ ತನಿಖೆಯ ವರದಿಯನ್ನ್ನು ಸಿಟ್ ನ್ಯಾಯಾಲಯಕ್ಕೆ ತಿಳಿಸಿದ ಬಳಿಕವೂ ಅಜಯ್ ಮಿಶ್ರಾ ಅವರನ್ನು ಕೇಂದ್ರ ಸರಕಾರ ಸಂಪುಟದಿಂದ ವಜಾಗೊಳಿಸಿಲ್ಲ. ಅಂದರೆ ಅಜಯ್ ಮಿಶ್ರಾರನ್ನು ಸಂಪುಟದಲ್ಲಿ ಇನ್ನೂ ಉಳಿಸಿಕೊಳ್ಳುವ ಮೂಲಕ, ಸಂಚಿನಲ್ಲಿ ಅಜಯ್ ಮಿಶ್ರಾ ಮಾತ್ರವಲ್ಲ, ಕೇಂದ್ರ ಸರಕಾರವೂ ಭಾಗಿಯಾಗಿದೆ ಎಂದು ಜನರು ಭಾವಿಸಬೇಕಾಗುತ್ತದೆ. ಈಗಾಗಲೇ ವಿರೋಧ ಪಕ್ಷಗಳು ಅಜಯ್ ಮಿಶ್ರಾ ಅವರ ವಜಾಕ್ಕೆ ಆಗ್ರಹಿಸುತ್ತಿವೆ. ಆದರೆ ಕೇಂದ್ರ ಸರಕಾರ ಯಾವುದೇ ಪ್ರತಿಕ್ರಿಯೆಯನ್ನು ಈವರೆಗೆ ನೀಡಿಲ್ಲ. ಈ ಮೂಲಕ ಪರೋಕ್ಷವಾಗಿ ರೈತರ ಹತ್ಯೆಯನು್ನ ಸರಕಾರವೇ ಸಮರ್ಥಿಸಿದಂತಾಗಿದೆ.

ತನಿಖೆ ಪೂರ್ಣಗೊಂಡು ಆರೋಪಿಗೆ ಶಿಕ್ಷೆಯಾಗಬೇಕಾದರೆ ಇನ್ನಾದರೂ ಅಜಯ್ ಮಿಶಾ ್ರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು. ಅವಘಡದ ಸಂಚು ರೂಪಿಸಿದವರೇ ತನಿಖೆಯನ್ನು ನಡೆಸಿದರೆ, ಸಂತ್ರಸ್ತರಿಗೆ ನ್ಯಾಯ ಸಿಗುವುದಾದರೂ ಹೇಗೆ? ಕೊಲೆ ಆರೋಪಿಗಳ ಜೊತೆಗೆ ಸಂಬಂಧವನ್ನು ಇಟ್ಟುಕೊಳ್ಳುವುದು ಒಬ್ಬ ಗೃಹ ಸಚಿವರಿಗಿರುವ ಅಧಿಕೃತ ಮಾನದಂಡ ಎಂದು ಸರಕಾರ ಭಾವಿಸಿದೆಯೇ? ಗೃಹ ಸಚಿವರಾಗಿರುವ ಅಮಿತ್ ಶಾ ಅವರಿಗೂ ಈ ಅರ್ಹತೆಯಿರುವುದರಿಂದ, ಅವರಿಗೆ ಹೋಲಿಸಿದರೆ ಅಜಯ್ ಮಿಶ್ರಾ ಮೇಲಿರುವ ಆರೋಪ ತೀರಾ ಸಣ್ಣದು ಎಂದು ಕೇಂದ್ರ ಸರಕಾರ ಭಾವಿಸಿದೆಯೇ? ನಿಜ, ಗುಜರಾತ್ ಹತ್ಯಾಕಾಂಡದ ಕಳಂಕವನ್ನು ಮೈತುಂಬಾ ಅಂಟಿಸಿಕೊಂಡಿದ್ದ ವ್ಯಕ್ತಿ, ದೇಶದ ಗೃಹ ಸಚಿವರಾಗಿರುವಾಗ, ಯಕಶ್ಚಿತ್ ನಾಲ್ಕು ರೈತರನ್ನು ಕೊಂದು ಹಾಕಿದ ಆರೋಪಿಯ ತಂದೆ ಎನ್ನಿಸಿಕೊಂಡದಕ್ಕೆ ಅಜಯ್ ಮಿಶ್ರಾರನ್ನು ವಜಾಗೊಳಿಸುವುದು ಸರಿಯಲ್ಲ ಎಂದು ಕೇಂದ್ರ ಸರಕಾರ ಭಾವಿಸಿರಬೇಕು. ಅದೇ ಕಾರಣಕ್ಕೆ ಅವರ ರಕ್ಷಣೆಗೆ ಖುದ್ದು ಪ್ರಧಾನಿ ಮೋದಿಯವರು ನಿಂತಿದ್ದಾರೆ ಎಂದು ದೇಶದ ಜನತೆ ಭಾವಿಸಬೇಕಾಗಿದೆ. ಒಟ್ಟಿನಲ್ಲಿ, ಕ್ರಿಮಿನಲ್ ಆರೋಪಗಳನ್ನು ಹೊತ್ತವರ ಕೈಗೆ, ದೇಶದ ಕ್ರಿಮಿನಲ್‌ಗಳನ್ನು ಬಗ್ಗು ಬಡಿಯುವ ಹೊಣೆಗಾರಿಕೆಗಳನ್ನು ಕೊಟ್ಟಿದ್ದೇವೆ. ಕುಂಟನ ಹೆಗಲ ಮೇಲೆ ಕುರುಡ ಕೂತಿದ್ದಾರೆ. ದೇಶ ಕ್ರಿಮಿನಲ್‌ಗಳ ಸ್ವರ್ಗವಾಗದೇ ಇನ್ನೇನಾದೀತು?.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News