ಕಾಂಗ್ರೆಸ್ ಶಾಸಕರ ಟ್ರ್ಯಾಕ್ಟರ್ ರ್‍ಯಾಲಿಗೆ ತಡೆ: ಪೊಲೀಸರ ವಿರುದ್ಧ ವಿಧಾನ ಪರಿಷತ್ತಿನಲ್ಲಿ ಹಕ್ಕುಚ್ಯುತಿ ಮಂಡನೆ
ಬೆಳಗಾವಿ, ಡಿ.17: ಶಾಸಕರನ್ನು ಸುವರ್ಣ ವಿಧಾನಸೌಧ ಪ್ರವೇಶ ತಡೆದ ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿದರು.
ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಗುರುವಾರ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್ ಶಾಸಕರು ಟ್ರಾಕ್ಟರ್ ಮೂಲಕ ಸದನಕ್ಕೆ ಹಾಜರಾಗಲು ಬರುತ್ತಿದ್ದೆವು. ಈ ಸಂದರ್ಭದಲ್ಲಿ ಸುವರ್ಣ ವಿಧಾನಸೌಧ ಮುಖ್ಯ ಪ್ರವೇಶ ದ್ವಾರದಲ್ಲಿ ಪೊಲೀಸ್ ಅಧಿಕಾರಿಗಳಾದ ತ್ಯಾಗರಾಜನ್, ಸತೀಶ್ ಕುಮಾರ್ ನಮ್ಮನ್ನು ತಡೆದು, ಹಕ್ಕುಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ನಿಮ್ಮ(ಸಭಾಪತಿ) ಗಮನಕ್ಕೆ ತಂದರೂ ನಮಗೆ ಒಳಗಡೆ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿಲ್ಲ. ಅಷ್ಟೇ ಅಲ್ಲದೆ, ಪೊಲೀಸರು ಯಾರು ಸಭಾಪತಿ ಎಂದು ಪ್ರಶ್ನಿಸಿ ಪೀಠಕ್ಕೆ ಅಗೌರವ ತೋರಿದ್ದಾರೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಹೌದು, ಈ ಬಗ್ಗೆ ನಾನು ಗೃಹ ಮತ್ತು ಕಾನೂನು ಸಚಿವರಿಗೆ ಮಾಹಿತಿ ನೀಡಿದರೂ, ನಿಮ್ಮನ್ನು ಒಳಗಡೆ ಬಿಟ್ಟಿಲ್ಲ ಎನ್ನುವ ಮಾಹಿತಿ ಬಂದಿದೆ ಎಂದರು.
ಬಳಿಕ ಎಸ್.ಆರ್.ಪಾಟೀಲ್, ಹಲವು ಜ್ವಲಂತ ಸಮಸ್ಯೆಗಳ ಕುರಿತು ನಾವೂ ಸದನಕ್ಕೆ ಬರುತ್ತೇವೆ. ಟ್ರಾಕ್ಟರ್, ಎತ್ತಿನಗಾಡಿ, ಸೈಕಲ್‍ನಲ್ಲೂ ಬರುತ್ತೇವೆ. ಅದನ್ನು ತಡೆಯಲು ಈ ಪೊಲೀಸರು ಯಾರು, ಇದಕ್ಕೆ ಸರಕಾರವೇ ಉತ್ತರಿಸಬೇಕು ಎಂದು ಪಟ್ಟು ಹಿಡಿದರು.
ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಈ ರೀತಿ ಆಗಿದೆ. ಹಾಗಾಗಿ ಶಾಸಕರ ಹಕ್ಕು 174ನೇ ನಿಯಮ, ಮಂಡಿಸಿದ್ದೇನೆ. ನಮ್ಮನ್ನು ತಡೆದ ಹಿರಿಯ ಪೊಲೀಸರಿಗೆ ಅಷ್ಟೊಂದು ಜ್ಞಾನ ಇಲ್ಲವೇ. ಇಂತಹವರ ವಿರುದ್ಧ ಕಠಿಣ ಕ್ರಮ ಆಗಬೇಕು. ಈ ವಿಚಾರವನ್ನು ಹಕ್ಕು ಬಾಧ್ಯತಾ ಸಮಿತಿಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು, ಪ್ರತಿಪಕ್ಷದ ಸದಸ್ಯರನ್ನು ತಡೆದು ನಿಲ್ಲಿಸಿರುವುದು ಅಕ್ಷಮ್ಯ, ಘಟನೆ ನಡೆದು 24 ಗಂಟೆಯಾಗಿದೆ. ಸರಕಾರ ಕೂಡಲೇ ಸದರಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಿತ್ತು ಎಂದು ಧ್ವನಿಗೂಡಿಸಿದರು.
ಸಭಾಪತಿ ಹೊರಟ್ಟಿ, ಪೊಲೀಸರ ವರ್ತನೆಯ ಕುರಿತು ಪ್ರತಿಪಕ್ಷದ ನಾಯಕರು ಮಂಡಿಸಿದ ವಾದ ನನಗೆ ಮನವರಿಕೆಯಾಗಿದೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳುತ್ತೇನೆ. ಈಗಲೇ ಹಕ್ಕುಬಾಧ್ಯತಾ ಸಮಿತಿಗೆ ವಹಿಸುವುದಾಗಿ ಪೀಠದಿಂದ ಆದೇಶಿಸಿದರು.
ತದನಂತರ, ಬಿ.ಕೆ.ಹರಿಪ್ರಸಾದ್, ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವಾಗಬೇಕು ಎಂದು ಒತ್ತಾಯಿಸಿದಾಗ, ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಎಂದಿನಂತೆ ಸಾಮಾನ್ಯ ವಾಹನದಲ್ಲಿ ಬರದೆ ಇದ್ದರಿಂದ ಪೆÇಲೀಸರು ತಡೆ ಹಿಡಿದು ನಿಲ್ಲಿಸಿದ್ದಾರೆ. ನಮ್ಮ ಗಮನಕ್ಕೆ ಬಂದ ತಕ್ಷಣ ಶಾಸಕರಿದ್ದ ಟ್ರ್ಯಾಕ್ಟರ್ ಅನ್ನು ಒಳಗೆ ಕಳುಹಿಸಿಕೊಡಲಾಗಿದೆ ಎಂದು ಸಮಜಾಯಿಷಿ ನೀಡಿದರು.