×
Ad

ನೀವೂ ದಿನ ಟ್ರ್ಯಾಕ್ಟರ್ ನಲ್ಲೇ ಸದನಕ್ಕೆ ಬರುತ್ತೀರಾ ಎಂದ ಸಚಿವ ನಾರಾಯಣಗೌಡ ಹೇಳಿಕೆಗೆ ಕಾಂಗ್ರೆಸ್ ಧರಣಿ

Update: 2021-12-17 17:06 IST

ಬೆಳಗಾವಿ, ಡಿ.17: ನೀವೂ ದಿನ ಟ್ರ್ಯಾಕ್ಟರ್ ನಲ್ಲೇ ಸದನಕ್ಕೆ ಬರುತ್ತೀರಾ ಎಂದು ರೇಷ್ಮೇ ಸಚಿವ ನಾರಾಯಣಗೌಡ ನೀಡಿದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದರು.

ಶುಕ್ರವಾರ ಪರಿಷತ್ತಿನ ಕಲಾಪದಲ್ಲಿ ಶಾಸಕರನ್ನು ಸುವರ್ಣ ವಿಧಾನಸೌಧ ಪ್ರವೇಶ ತಡೆದ ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿ, ಟ್ರ್ಯಾಕ್ಟರ್ ನಲ್ಲಿ ಬರುತ್ತಿರುವಾಗ ನಮ್ಮನ್ನು ಉದ್ದೇಶ ಪೂರ್ವಕವಾಗಿ ತಡೆದರು ಎಂದು ಸದನಕ್ಕೆ ತಿಳಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ನಾರಾಯಣಗೌಡ, ನೀವೂ ದಿನಲೂ ಟ್ರಾಕ್ಟರ್ ನಲ್ಲೇ ಬರುತ್ತೀರಾ. ಒಂದು ದಿನ ಬಂದಿದ್ದೀರಾ. ಹೀಗಾಗಿ, ಬಿಟ್ಟಿಲ್ಲ ಎಂದು ವ್ಯಂಗ್ಯವಾಡಿದರು.

ಇದಕ್ಕೆ ಗರಂ ಆದ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಪ್ರತಾಪ್ ಚಂದ್ರ ಶೆಟ್ಟಿ, ಬಿ.ಕೆ.ಹರಿಪ್ರಸಾದ್, ಎಂ.ನಾರಾಯಣಸ್ವಾಮಿ ಸೇರಿದಂತೆ ಹಲವು ಸದಸ್ಯರು ಎದ್ದು ನಿಂತು, ‘ಎಂತಾ ಮಂತ್ರಿ ಇವಾ, ಇವನ್ಯಾರು ನಮಗೆ ಹೇಳಲಿಕ್ಕೆ’, ಈತ ಕ್ಷಮೆಯಾಚಿಸಬೇಕೆಂದು ಗದ್ದಲ ಎಬ್ಬಿಸಿದರು.

ಆನಂತರ, ಸದನದ ಬಾವಿಗಿಳಿದು ಧರಣಿ ನಡೆಸಿ, ಸಚಿವರು ರಾಜೀನಾಮೆ ನೀಡಬೇಕೆಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಸಚಿವರು, ನಾನೂ ಎತ್ತಿನಗಾಡಿಯಲ್ಲಿ ಹೋಗಿದ್ದೇನೆ ಎಂದರು. 

ಬಳಿಕ ಆಡಳಿತ ಪಕ್ಷದ ಸದಸ್ಯರು ಸಚಿವರ ಪರ ನಿಂತು ಪ್ರತಿಪಕ್ಷದ ಮೇಲೆ ವಾಗ್ದಾಳಿ ನಡೆಸಿದರು. ಹೀಗೆ, ಎರಡು ಕಡೆಗಳಿಂದ ಕೆಲಕಾಲ ವಾಗ್ವಾದ ನಡೆಯಿತು.

ಆಗ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸಚಿವರು ಮಾತನಾಡುವಾಗ ಗಂಭೀರವಾಗಿರಬೇಕು. ಅಲ್ಲದೆ, ಮಾತನಾಡುವ ಮೊದಲು ಸಭಾಪತಿ ಅವರೊಂದಿಗೆ ಅನುಮತಿ ಪಡೆಯಬೇಕು. ಸೌಜನ್ಯವಾಗಿ ವರ್ತಿಸಬೇಕು ಎಂದು ಚಾಟಿ ಬೀಸಿದರು.

ಬಳಿಕ, ವಿಪಕ್ಷ ಸದಸ್ಯರು ತಮ್ಮ ಆಸನಗಳಿಗೆ ಮರಳುತ್ತಿದ್ದಂತೆ ಇದನ್ನೆಲ್ಲ ಕಡಿತದಿಂದ ತೆಗೆಯಿರಿ ಎಂದು ಸಭಾಪತಿ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News