×
Ad

ದೇವರಾಜ ಅರಸು ಸಂಸ್ಥೆ ಮುಚ್ಚುವುದಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2021-12-17 17:21 IST

ಬೆಳಗಾವಿ, ಡಿ.17: ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವ ಉದ್ದೇಶ ಸರಕಾರಕ್ಕೆ ಇಲ್ಲ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.

ಶುಕ್ರವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಇದನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಹಲವಾರು ಜಾತಿಗಳನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಬೇಕೆಂದು ಕೆಲವರು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಸರಕಾರ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಸಂಬಂಧ ಚರ್ಚೆ ನಡೆಸಲಿದೆ ಎಂದೂ ಸಚಿವರು ಹೇಳಿದರು.

ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಹರಿಪ್ರಸಾದ್, ಕೆಲ ಪ್ರಬಲ ಜಾತಿಗಳಿಗೆ ಸರಕಾರ ನಿಗಮ ಮಂಡಳಿ ತೆರೆದು ಅನುಕೂಲ ಮಾಡಿಕೊಟ್ಟಿದೆ. ಆದರೆ, ಹಿಂದುಳಿದ ವರ್ಗಗಳ ಯೋಜನೆ, ಸಂಸ್ಥೆಗಳ ಮೇಲೆ ಸಹಾಯಧನ ನೀಡಲು, ಕಾರ್ಯ ಚಟುವಟಿಕೆ ನಡೆಸಲು ನಿರ್ಲಕ್ಷ್ಯ ಮನೋಭಾವ ಹೊಂದಿದೆ ಎಂದು ಸದನದ ಗಮನ ಸೆಳೆದರು.

ಅರಸು ಎರಡು ಎಕರೆ ಕೊಟ್ಟರು: ಕೋಟ ಶ್ರೀನಿವಾಸ್

ನಾನು ಊರಿನಲ್ಲಿ ಎರಡು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇನೆ ಎಂದರೆ, ಅದಕ್ಕೆ ದೇವರಾಜ ಅರಸು ಅವರು ಜಾರಿತಂದ ‘ಉಳುವವನೇ ಭೂಮಿ ಒಡೆಯ’ ಯೋಜನೆಯೇ ನೇರ ಕಾರಣ. ಹಾಗಾಗಿ, ಅವರ ಮೇಲೆ ಅಪಾರ ಗೌರವವಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News