ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಆರ್. ಎಲ್. ಜಾಲಪ್ಪ ನಿಧನ
ಕೋಲಾರ , ಡಿ. 17 : ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆರ್.ಎಲ್ ಜಾಲಪ್ಪ ಶುಕ್ರವಾರ ಸಂಜೆ ನಿಧನರಾಗಿದ್ದಾರೆ.
ಅಂಗಾಂಗಳ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ 98 ವರ್ಷದ ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ ಶುಕ್ರವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.
ಶ್ವಾಸಕೋಶ ಹಾಗೂ ಮೂತ್ರ ಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಡಿ.10 ರಂದು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಇದೇ ಫೆಬ್ರವರಿಯಲ್ಲಿ ಜಾಲಪ್ಪ ಅವರು ಪಾರ್ಶ್ವವಾಯುಗೆ ತುತ್ತಾಗಿದ್ದು, ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಆದ್ದರಿಂದ ಸತತ ಎರಡು ಗಂಟೆಗಳ ಕಾಲ ಶಸ್ತ್ರ ಚಿಕತ್ಸೆ ಮಾಡಲಾಗಿತ್ತು.
ಕರ್ನಾಟಕದ ಪ್ರಮುಖ ರಾಜಕಾರಣಿಯಾಗಿದ್ದ ಜಾಲಪ್ಪ 4 ಬಾರಿ ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಸಚಿವ ರಾಗಿದ್ದರು. ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದರು.
ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ವೈದ್ಯಕೀಯ ನೆರವು ನೀಡುವ ಸಲುವಾಗಿ ಕೋಲಾರದ ಅಂದಿನ ರಾಷ್ಟ್ರೀಯ ಹೆದ್ದಾರಿ 4ರ ಟಮಕ ಸಮೀಪ ಶ್ರೀ ದೇವರಾಜ್ ಅರಸ್ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ ಮತ್ತು ಆರ್. ಎಲ್. ಜಾಲಪ್ಪ ಆಸ್ಪತ್ರೆ ಸ್ಥಾಪಿಸಿ ಕರ್ನಾಟಕ, ಆಂದ್ರ ತಮಿಳು ನಾಡು ಗಡಿ ಪ್ರದೇಶಗಳ ಜನರಿಗೆ ಆರೋಗ್ಯ ಸೇವೆ ನೀಡಿದ್ದಾರೆ.
ಸಾವಿನಲ್ಲೂ ಸಾರ್ಥಕ ಮೆರೆದ ಆರ್.ಎಲ್ ಜಾಲಪ್ಪ: ನೇತ್ರ ದಾನ ಮಾಡುವಂತೆ ಮಕ್ಕಳಿಗೆ ತಿಳಿಸಿದ್ದರಿಂದ ಜಾಲಪ್ಪ ಅವರ ಮಕ್ಕಳ ಅನುಮತಿ ಪಡೆದು ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ ಎಂದು ಜಾಲಪ್ಪ ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ.
— Siddaramaiah (@siddaramaiah) December 17, 2021
ಇವರ ಸಾವಿನಿಂದ ನನ್ನ ಕುಟುಂಬದ ಸದಸ್ಯನಂತಿದ್ದ, ನನ್ನ ಹಿತೈಷಿ ಮತ್ತು ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ.
ಅವರ ಕುಟುಂಬದ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರುವೆ. pic.twitter.com/OsZgki3Wji