×
Ad

ಮೈಸೂರು: ಕಾಂಗ್ರೆಸ್ -ಜೆಡಿಎಸ್ ಒಳ ಒಪ್ಪಂದದಿಂದ ನನಗೆ ಸೋಲಾಗಿದೆ ಎಂದ ಬಿಜೆಪಿ ಪರಾಜಿತ ಅಭ್ಯರ್ಥಿ ರಘು ಕೌಟಿಲ್ಯ

Update: 2021-12-17 20:42 IST

ಮೈಸೂರು,ಡಿ.17: ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲ್ನೋಟಕ್ಕೆ ಕಿತ್ತಾಡಿಕೊಂಡು, ಒಳಗೆ ಒ್ಪಪಂದ ಮಾಡಿಕೊಂಡಿದ್ದರಿಂದ ನನಗೆ ಎರಡನೇ ಪ್ರಾಶಸ್ತ್ಯದ ಮತಗಳು ಹೆಚ್ಚು ಬರಲಿಲ್ಲ ಎಂದು ವಿಧಾನ ಪರಿಷತ್ ಚುನಾವಣೆ ಪರಾಜಿತ ಅಭ್ಯರ್ಥಿ ಆರ್. ರಘು ಕೌಟಿಲ್ಯ ಆರೋಪಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಸೋಲಿಗೆ ಕೆಲ ಬಿಜೆಪಿ ನಾಯಕರು ಮತ್ತು ಮುಖಂಡರು ಕಾರಣ ಎಂಬುದು ಕೇವಲ ಊಹಾಪೋಹ ಮಾತುಗಳಷ್ಟೇ. ಚುನಾವಣೆ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಯಾರ ಒಳ ಏಟಿನಿಂದ ನನಗೆ ಸೋಲಾಗಿಲ್ಲ. ನನ್ನ ಚುನಾವಣೆ ಸೋಲಿಗೆ ಯಾರನ್ನೂ ದೂರುವುದಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುವುದಿಲ್ಲ ಎಂದರು.

ಕಾಂಗ್ರೆಸ್-ಜೆಡಿಎಸ್‍ನವರು ಮೇಲ್ನೋಟಕ್ಕೆ ಆಗದವರಂತೆ ಇದ್ದಾರೆ  ಒಳಗೊಳಗೆ ಚೆನ್ನಾಗಿರುತ್ತಾರೆ. ಕಾಂಗ್ರೆಸ್-ಜೆಡಿಎಸ್‍ನ ಅನೈತಿಕ ಒಳ ಒಪ್ಪಂದವೂ ನನ್ನ ಸೋಲಿಗೆ ಕಾರಣವಿರಬಹುದು. ಮೊದಲ ಪ್ರಾಶಸ್ತ್ಯ ಮತದಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಬ್ಯಾಲೆಟ್‍ನಲ್ಲಿ ಹೆಚ್ಚಿನ ಪಾಲು ಜೆಡಿಎಸ್ ಅಭ್ಯರ್ಥಿಗೆ 2ನೇ ಪ್ರಾಶಸ್ತ್ಯ ಮತಗಳನ್ನು ನೀಡಲಾಗಿದೆ. ಇದನ್ನು ಗಮನಿಸಿದರೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಒಳಒಪ್ಪಂದ ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದರು.

ಹಲವು ಸೂಕ್ಷ್ಮಾತಿ ಸೂಕ್ಷ್ಮ ಸಮುದಾಯಗಳು ಹಿಂದುಳಿದ ವರ್ಗ ಎಂಬ ಹಣೆಪಟ್ಟಿ ಹೊತ್ತುಕೊಂಡು ಶೋಷಣೆಗೆ ಒಳಗಾಗಿವೆ. ಇದರಿಂದ ಕುಲ ಕಸುಬು ಆಧಾರಿತ ಈ ಸಣ್ಣ ಸಮುದಾಯಗಳು ಸಂಕಷ್ಟದಲ್ಲಿವೆ. ಇನ್ನು ಮುಂದೆ ಈ ಸಮುದಾಯಗಳನ್ನು ಹಿಂದೂ ಅಲ್ಪಸಂಖ್ಯಾತ ಸಮುದಾಯ ಎಂದು ಕೆರೆಯಬೇಕಿದೆ. ಈ ಬಗ್ಗೆ ಹೋರಾಟ ನಡೆಸಿ, ಹಿಂದೂ ಅಲ್ಪ ಸಂಖ್ಯಾತ ಸಮುದಾಯಗಳಿಗೆ ಉದ್ಯೋಗ, ರಾಜಕೀಯ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಎರಡೂ ಜಿಲ್ಲೆಗಳ ಮುಖಂಡರು, ಕಾರ್ಯಕರ್ತರು, ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್, ಸಂಸದರುಗಳಾದ ವಿ.ಶ್ರೀನಿವಾಸ ಪ್ರಸಾದ್, ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿಯ ಎಲ್ಲ ಶಾಸಕರು ಸಂಘಟಿತ ಹೋರಾಟ ಮಾಡಿದರು. ಆದರೆ ಎರಡನೇ ಬಾರಿಯೂ ಮತದಾರರು ನನ್ನನ್ನು ವಿಜಯದ ದಡ ಸೇರಿಸಲಿಲ್ಲ ಈ ಬಾರಿ ವಿಜಯದ ದಡ ಸೇರಿಸುತ್ತಾರೆಂಬ ವಿಶ್ವಾಸವಿತ್ತು. ಆದರೆ ಅಂತಿಮ ಘಟ್ಟದಲ್ಲಿ ತೆಪ್ಪದಲ್ಲಿ ಕುಳಿತು ಹೋರಾಡುವಂತಾಯಿತು. ಚುನಾವಣೆ ಸೋಲಿನಿಂದ ವಿಚಲಿತನಾಗಿಲ್ಲ ಎಂದರು.

ಮುಂದೆ ಚುನಾವಣೆ ರಾಜಕೀಯದಿಂದ ದೂರ ಉಳಿದರೂ ಪಕ್ಷದ ಸೇವೆಯಲ್ಲಿ ನಿರಂತರವಾಗಿ ಮುಂದುವರೆಯುತ್ತೇನೆ. ಮತದಾರರು ನಮ್ಮನ್ನು ಪರಿಪೂರ್ಣವಾಗಿ ಸ್ವೀಕಾರ ಮಾಡದೆ ಇರುವುದು ನೋವು ತಂದಿದೆ. ಪ್ರಥಮ ಪ್ರಾಶಸ್ತ್ಯ ಮತಗಳಲ್ಲೇ ನಾನು ಗೆಲ್ಲುವ ವಿಶ್ವಾವಿತ್ತು. ಸೈದ್ಧಾಂತಿಕ ಹೋರಾಟದ ಮೂಲಕ ಬಂದ ನನಗೆ ವಿಧಾನ ಪರಿಷತ್ ಪ್ರವೇಶಿಸಲು ಸಾಧ್ಯವಾಗದ್ದು ನೋವುಂಟು ಮಾಡಿದೆ ಎಂದು ರಘು ಕೌಟಿಲ್ಯ ಬೇಸರ ವ್ಯಕ್ತಪಡಿಸಿದರು.

ರಘು ಕೌಟಿಲ್ಯ ಸೋಲಿಗೆ ಬಿಜೆಪಿ ಮುಖಂಡರೇ ಕಾರಣ ಎಂಬ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೊ ತಿಳಿದಿಲ್ಲ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದೂ ಇಲ್ಲ. ಸದ್ಯಕ್ಕೆ ನನಗೆ ಚುನಾವಣೆ ರಾಜಕಾರಣದ ಬಗ್ಗೆ ಭ್ರಮ ನಿರಸನವಾಗಿದೆ. ನಾನು ಮುಂದೆ ರಾಜಕಾರಣದಲ್ಲಿ ಸಕ್ರಿಯನಾಗಿರುತ್ತೇನೆ ಅಷ್ಟೇ. ನನಗೆ ಮತ ನೀಡಿ ಬೆಂಬಲಿಸಿದ ಮತದಾರರಿಗೆ ಕೃತಜ್ಞನಾಗಿರುತ್ತೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರ ಕಾರ್ಯದರ್ಶಿ ಮಹೇಶ್ ಕುಮಾರ್, ಮುಖಂಡರಾದ ಮಹೇಶ್ ರಾಜ್ ಅರಸ್, ಪ್ರದೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News