×
Ad

ಭಿಕ್ಷಾಟನೆ ತಡೆಗೆ ಪುನರ್ ವಸತಿ ಕೇಂದ್ರ ಸ್ಥಾಪನೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2021-12-17 21:18 IST

ಬೆಳಗಾವಿ ಸುವರ್ಣವಿಧಾನಸೌಧ, ಡಿ.17: ಭಿಕ್ಷಾಟನೆ ತಡೆಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪುನರ್ ವಸತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ಶುಕ್ರವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವಾರದಲ್ಲಿಯೇ ಗೃಹ, ಮಹಿಳಾ ಮತ್ತು ಮಕ್ಕಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿ, ಭಿಕ್ಷಾಟನೆ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ 18 ಜಿಲ್ಲೆಗಳಲ್ಲಿ ಪುನರ್‍ವಸತಿ ಕೇಂದ್ರಗಳಿದ್ದು, ಉಳಿದ ಹನ್ನೆರಡು ಜಿಲ್ಲೆಯಲ್ಲೂ ವಸತಿ ಕೇಂದ್ರ ಸ್ಥಾಪಿಸಿ, ಭಿಕ್ಷಾಟನೆ ನಿಯಂತ್ರಣ ಮಾಡಲಾಗುವುದು ಎಂದು ಸಚಿವರು ಸದನಕ್ಕೆ ಹೇಳಿದರು. 

ಅಲ್ಲದೆ, ಇತ್ತೀಚೆಗೆ ಭಿಕ್ಷಾಟನೆ ದೃಶ್ಯಗಳು ಹೆಚ್ಚಾಗಿವೆ ಎಂದ ಅವರು, ಪೋಷಕರು ತಮ್ಮ ಮಕ್ಕಳನ್ನಿಟ್ಟು ಭಿಕ್ಷೆ ಬೇಡುವುದು ಮಾತ್ರವಲ್ಲದೆ, ಬಾಡಿಗೆಗೆ ಯಾರದ್ದೋ ಮಕ್ಕಳನ್ನು ಪಡೆದು ಸಂಜೆವರೆಗೂ ಭಿಕ್ಷೆ ಬೇಡುತ್ತಾರೆ ಎಂದು ತಿಳಿಸಿದರು.

ಭಿಕ್ಷಾಟನೆ ಮುಕ್ತವಾಗಲಿ: ಈ ವೇಳೆ ಮಧ್ಯ ಪ್ರವೇಶಿಸಿದ ಪರಿಷತ್ತಿನ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ನಮ್ಮ ರಾಜ್ಯವೂ ಭಿಕ್ಷಾಟನೆ ಮುಕ್ತವಾಗಬೇಕು. ರಸ್ತೆಯಲ್ಲಿ ಭಿಕ್ಷೆ ಬೇಡಿದರೆ, ದೇಶ, ರಾಜ್ಯದ ಗೌರವ ತಗ್ಗಲಿದೆ. ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಸಚಿವರು ಗಮನ ಹರಿಸಬೇಕೆಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News