ವಿಷಯುಕ್ತ ಆಹಾರ ಸೇವನೆ: 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ; ಆಸ್ಪತ್ರೆಗೆ ದಾಖಲು
ದಾವಣಗೆರೆ: ಅಲ್ಪ ಸಂಖ್ಯಾತರ ಮೊರಾರ್ಜಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ಬೆಳಗ್ಗೆ ವಿಷಯುಕ್ತ ಆಹಾರ ಸೇವಿಸಿ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಜಗಳೂರಿನಲ್ಲಿ ನಡೆದಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಅಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿ ನಿಲಯದಲ್ಲಿ ಒಟ್ಟು 107 ಬಾಲಕಿಯರ ಹಾಜರಾತಿ ಇದ್ದು. ಇದರಲ್ಲಿ 40ಕ್ಕೂ ಹೆಚ್ಚು ಮಕ್ಕಳು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಚಪಾತಿ, ಬಿಟ್ರೋಟ್ ಪಲ್ಯ ಊಟ ಮಾಡಿದ್ದರು, ಅಲ್ಲದೆ ಬೆಳಗ್ಗೆ 9ಕ್ಕೆ ಉಪಹಾರ ಅವಲಕ್ಕಿ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ.
10 ಗಂಟೆಯ ವೇಳೆಗೆ ಇಬ್ಬರಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಬಲಿಕ ಇತರ ವಿದ್ಯಾರ್ಥಿನಿಯರಿಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ.
ಕೂಡಲೇ ಸಾರ್ವಜನಿಕರ ಸಹಾಯದಿಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಅಂಬ್ಯುಲೆನ್ಸ್ ಹಾಗೂ ಸರ್ಕಾರಿ ವಾಹನ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಡಾ.ನಿರಾಜ್ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್ ಮತ್ತು ಮಕ್ಕಳ ತಜ್ಞ ವೈದ್ಯ ಜಯಕುಮಾರ್ ಮತ್ತು ವೈದ್ಯರ ಮತ್ತು ನರ್ಸ್‍ಗಳು ಚಿಕಿತ್ಸೆ ನೀಡುತ್ತಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಶಶೀಧರಯ್ಯ, ಪ.ಪಂ.ಅಧ್ಯಕ್ಷ ಎಸ್.ಸಿದ್ದಪ್ಪ, ಪಟ್ಟಣ ಪಂಚಾಯತಿ ಸದಸ್ಯರು, ಯುವ ಮುಖಂಡರು. ಪ್ರಗತಿಪರ ಸಂಘಟನೆಗಳ ಮುಖಂಡರು ಭೇಟಿ ನೀಡಿ ಮಕ್ಕಳಿಗೆ ಧೈರ್ಯ ತುಂಬಿದರು.