ಕೈಗಾರಿಕೆ ಸ್ಥಾಪಿಸದಿದ್ದರೆ ಭೂಮಿ ವಾಪಸ್: ಸಚಿವ ಮುರುಗೇಶ್ ನಿರಾಣಿ

Update: 2021-12-17 18:08 GMT

ಬೆಳಗಾವಿ, ಡಿ. 17: ಕೈಗಾರಿಕಾ ಉದ್ದೇಶಕ್ಕೆ ಪಡೆದ ಭೂಮಿಯಲ್ಲಿ ನಿಗದಿತ ಅವಧಿಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡದಿದ್ದರೆ ಅಂತಹವರ ಭೂಮಿಗಳನ್ನು ಹಿಂಪಡೆದು ಬೇರೆಯವರಿಗೆ ಹಂಚಿಕೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಹಿರಿಯ ಸದಸ್ಯ ಶಿವಶಂಕರರೆಡ್ಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೈಗಾರಿಕಾ ಉದ್ದೇಶಕ್ಕೆ ಭೂಮಿಯನ್ನು ಪಡೆದು ಕೈಗಾರಿಕೆಗಳನ್ನು ಸ್ಥಾಪನೆ ಮಾಡದಿದ್ದರೆ ಅಂತಹವರಿಗೆ ಮಾರಾಟ ಒಪ್ಪಂದ ಪತ್ರವನ್ನು ನೀಡುವುದಿಲ್ಲ. ಹೀಗಾಗಿ ಅವರು ರಿಯಲ್ ಎಸ್ಟೇಟ್ ಮಾಡುವ ಪ್ರಶ್ನೆಯೆ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೈಗಾರಿಕಾ ಉದ್ದೇಶಕ್ಕೆ ಭೂಮಿ ಪಡೆದು ಯಾರು ಹಲವು ವರ್ಷಗಳಿಂದ ಕೈಗಾರಿಕೆ ಸ್ಥಾಪನೆ ಮಾಡದಿದ್ದರೆ ಅಂತಹವರ ಭೂಮಿಗಳನ್ನು ವಾಪಸ್ ಪಡೆಯಲಾಗುತ್ತಿದೆ. ಸುಮಾರು 500 ಎಕರೆ ಭೂಮಿಯನ್ನು ಈ ರೀತಿ ವಾಪಸ್ ಪಡೆದು ಬೇರೆಯವರಿಗೆ ಹಂಚಿಕೆ ಮಾಡಲು ಕ್ರಮ ವಹಿಸಲಿದೆ ಎಂದು ಅವರು ತಿಳಿಸಿದರು.

ಕಾನೂನಿನ ಅನ್ವಯ ಕೈಗಾರಿಕೆ ಸ್ಥಾಪನೆ ಮಾಡದವರಿಗೆ ನೋಟಿಸ್ ನೀಡಿ ಭೂಮಿ ವಾಪಸ್ ಪಡೆಯಲಾಗುತ್ತಿದೆ. ರಿಯಲ್ ಎಸ್ಟೇಟ್‍ಗೆ ಅವಕಾಶ ಮಾಡಿಕೊಡುತ್ತಿಲ್ಲ. ಗೌರಿಬಿದನೂರಿನ ಕುಡುಮಲಕುಂಟೆಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ 900 ಎಕರೆ ಭೂಮಿಯನ್ನು ಭೂ ಸ್ವಾಧೀನ ಮಾಡಲಾಗಿದೆ. ಒಂದು ತಿಂಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ ಭೂಸ್ವಾಧೀನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News