ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಕೆಲವರು ಸಂಚು ರೂಪಿಸುತ್ತಿದ್ದಾರೆ: ಸಿ.ಟಿ. ರವಿ
ಚಿಕ್ಕಮಗಳೂರು: ಕನ್ನಡ ವಿರೋಧಿಗಳು ರಾಜ್ಯದಲ್ಲಿ ಅರಾಜಕತೆ, ಸಂಘರ್ಷ ಸೃಷ್ಟಿಸುವ ಸಂಚು ರೂಪಿಸುತ್ತಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಗಡಿ ಭಾಗದ ಕೊಲ್ಲಾಪುರದಲ್ಲಿ ಕನ್ನಡ ಭಾವುಟವನ್ನು ಸುಟ್ಟರು. ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳಿಯುವ ಕೆಲಸ ಮಾಡಿದರು. ಈಗ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸ ಮಾಡಿದ್ದಾರೆ. ಇವರ ಉದ್ದೇಶ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ಸಂಘರ್ಷವನ್ನುಂಟು ಮಾಡುದೇ ಆಗಿದೆ ಎಂದರು.
ಅರಾಜಕತೆವಾದಿಗಳ ಕುಮ್ಮಕ್ಕಿಗೆ ಬಲಿಯಾಗದೆ ರಾಜ್ಯದ ಜನತೆ ಶಾಂತಿ ಸೌಹಾರ್ದತೆಯನ್ನು ಪಾಪಾಡಿಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಲಕ್ಷಾಂತರ ಕನ್ನಡಿಗರಿದ್ದಾರೆ. ಕರ್ನಾಟಕದಲ್ಲೂ ಲಕ್ಷಾಂತರ ಜನ ಮರಾಠಿಗಳಿದ್ದಾರೆ. ನಮ್ಮೆಲ್ಲರ ಭಾವನೆ ರಾಷ್ಟ್ರೀಯತೆ ಜೊತೆ ಹಾಸುಹೊಕ್ಕಾಗಿದೆ. ರಾಷ್ಟ್ರೀಯ ಹಿತಶಕ್ತಿಗೆ ಧಕ್ಕೆ ತರಲು ಕೆಲವರು ಷಡ್ಯಂತ್ರ ನಡೆಸುತ್ತಿದ್ದಾರೆ. ಆ ಷಡ್ಯಂತರಕ್ಕೆ ಸಾರ್ವಜನಿಕರು ಅವಕಾಶ ನೀಡಬಾರದು. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಿದೆ ಎಂದರು.