ರಾಯಣ್ಣನ ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ: ಸಚಿವ ಮುರುಗೇಶ್ ನಿರಾಣಿ

Update: 2021-12-18 12:50 GMT
 ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು, ಡಿ. 18: ಸ್ವಾತಂತ್ರ‍್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ವಿರೂಪಗೊಳಿಸಿದ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ರಾಜ್ಯ ಸರಕಾರ ಕಾನೂನು ಕ್ರಮ ತೆಗೆದುಕೊಳ್ಳಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಹೇಳಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಬ್ರಿಟಿಷರ ವಿರುದ್ಧ ತನ್ನ ಪ್ರಾಣವನ್ನೇ ತ್ಯಾಗ ಮಾಡಿ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ವೀರ ಸೇನಾನಿಯ ಪ್ರತಿಮೆಯನ್ನು ವಿರೂಪಗೊಳಿಸಿರುವುದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಆ ಪುಂಡರನ್ನು ಸೆದೆ ಬಡಿಯಲು ನಮ್ಮ ಸರಕಾರ ಬದ್ಧವಿದೆ. ಕನ್ನಡಿಗರಿಗೆ ಅಪಮಾನ ಮಾಡುವ ಯಾವುದೇ ದುಷ್ಟ ಶಕ್ತಿಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರಭಕ್ತರ ಪ್ರತಿಮೆ ಭಗ್ನಗೊಳಿಸುವುದು ದೇಶಭಕ್ತರ ಕೆಲಸವಲ್ಲ. ದೇಶಭಕ್ತರು ಎಲ್ಲಾ ಸಮುದಾಯಕ್ಕೆ ಸೇರಿದವರು. ದೇಶಕ್ಕಾಗಿ ತ್ಯಾಗ ಮಾಡಿದವರು. ಪ್ರತಿಮೆ ಸ್ಥಾಪಿಸುವುದು ಅವರನ್ನು ಗೌರವಿಸಬೇಕೇ ವಿನಾ ಅಪಮಾನ ಮಾಡುವುದಲ್ಲ ಎಂದು ನಿರಾಣಿ ಸಲಹೆ ಮಾಡಿದ್ದಾರೆ.
ರಾಷ್ಟ್ರಭಕ್ತರ ಪ್ರತಿಮೆಗಳನ್ನು ಯಾರೇ ಅಪಮಾನ ಮಾಡಿದರೆ, ಅಂತಹವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ರಾಜ್ಯ ಸರಕಾರ ವಿಶೇಷ ಕಾನೂನನ್ನು ಜಾರಿಗೆ ಮಾಡುವಂತೆಯೂ ಅಭಿಪ್ರಾಯಪಟ್ಟಿದ್ದಾರೆ.

ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರು ಸಹೋದರರಂತೆ ಬದುಕುತ್ತಿದ್ದೇವೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕೆಲವು ಪುಂಡರು ಈ ರೀತಿ ಮಾಡುತ್ತಿದ್ದು ಅವರನ್ನು ಸದೆ ಬಡಿಯಲಾಗುವುದು. ಇಂಥ ಘಟನೆ ಪುನಃ ಜರುಗದಂತೆ ಇನ್ನಷ್ಟು ಕಠಿಣ ಹಾಗೂ ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಪ್ರವೃತ್ತಿ ಸರಿಯಲ್ಲ ಎಂದಿದ್ದಾರೆ.

ಈ ಘಟನೆಯ ಹಿಂದಿರುವ ದುಷ್ಟಶಕ್ತಿಗಳ ವಿರುದ್ಧವೂ ಕೂಡ ಸರಕಾರ ಕ್ರಮ ತೆಗೆದುಕೊಳ್ಳಲಿದೆ. ಯಾವುದೇ ಕಾರಣಕ್ಕೂ ಕನ್ನಡಿಗರು ಸಹನೆಯನ್ನು ಕಳೆದುಕೊಳ್ಳಬಾರದು ಎಂದು ನಿರಾಣಿ ಮನವಿ ಮಾಡಿದ್ದಾರೆ.

ಮರಾಠಿಗರು, ಕನ್ನಡಿಗರು, ರಾಜ್ಯದಲ್ಲಿ ಸೌಹಾರ್ದಯುತ ಹಾಗೂ ಶಾಂತಿಯುತವಾಗಿ ಜೀವನ ನಡೆಸುತ್ತಿದ್ದು, ಕೆಲ ಕಿಡಿಗೇಡಿಗಳು ತಮ್ಮ ಅಸ್ತಿತ್ವಕ್ಕಾಗಿ ಇಂತಹ ದುಷ್ಕೃತ್ಯಗಳನ್ನು ನಡೆಸುತ್ತಿದ್ದಾರೆ. ಸರಕಾರ ಸೂಕ್ತ ಕ್ರಮ ಕೈಗೊಂಡು ಶಾಂತಿಯುತ ವಾತಾವರಣ ನಿರ್ಮಿಸಬೇಕೆಂದು ನಿರಾಣಿ  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News