ಚಿಕ್ಕಮಗಳೂರು: ಕೇಂದ್ರ ಅಧಿಕಾರಿಗಳ ತಂಡದಿಂದ ಅತಿವೃಷ್ಟಿ ಹಾನಿ ಸರ್ವೇಕ್ಷಣೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಮಳೆ ಹಾನಿಗೆ ಪರಿಹಾರ ನೀಡುವ ಸಂಬಂಧ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ವಿಪತ್ತು ಪರಿಶೀಲನಾ ತಂಡದ ಅಧಿಕಾರಿಗಳ ತಂಡ ಶನಿವಾರ ಪ್ರವಾಸ ಕೈಗೊಂಡು ಸರ್ವೇಕ್ಷಣೆ ನಡೆಸಿತು.
ರಸ್ತೆ ಮತ್ತು ಹೆದ್ದಾರಿ ಇಲಾಖೆಯ ಹಿರಿಯ ಅಧಿಕಾರಿ ಎಸ್.ವಿಜಯಕುಮಾರ್ ಮತ್ತು ಇಂಧನ ಮಂತ್ರಾಲಯದ ಭಾವ್ಯ ಪಾಂಡೆ ನೇತೃತ್ವದ ಕೇಂದ್ರ ಸರಕಾರದ ಆಂತರಿಕ ಇಲಾಖಾ ಅಧಿಕಾರಿಗಳ ಅಧ್ಯಯನ ತಂಡ ಶನಿವಾರ ಬೆಳಗ್ಗೆ ನಗರಕ್ಕೆ ಭೇಟಿ ನೀಡಿದ್ದು, ಬಳಿಕ ಅತಿವೃಷ್ಟಿ ಪ್ರದೇಶಕ್ಕೆ ಭೇಟಿ ನೀಡಿ ಹಾನಿಯ ಸಮೀಕ್ಷೆ ನಡೆಸಿತು. ಈ ವೇಳೆ ಸ್ಥಳೀಯರಿಂದ ಅಧಿಕಾರಿಗಳ ತಂಡ ಮಾಹಿತಿ ಪಡೆದುಕೊಂಡಿತು.
ಜಿಲ್ಲಾಧಿಕಾರಿ ಕೆ.ಎನ್,ರಮೇಶ್ ಅವರು ಈ ವೇಳೆ ಜಿಲ್ಲೆಯಲ್ಲಿ ಆಗಿರುವ ಬೆಳೆ, ಮನೆ ಹಾನಿ, ಜಾನುವಾರು ಜೀವ ಹಾನಿ ಮತ್ತು ರಸ್ತೆ, ಸೇತುವೆ, ವಿದ್ಯುತ್ ಕಂಬಗಳ ಹಾನಿ ಸೇರಿದಂತೆ ಇನ್ನಿತರ ಸಾರ್ವಜನಿಕ ಆಸ್ತಿಗಳ ಹಾನಿಯ ವಿವರವನ್ನು ಸಮರ್ಪಕವಾಗಿ ಕೇಂದ್ರ ವಿಪತ್ತು ಪರಿಶೀಲನಾ ತಂಡಕ್ಕೆ ಸಂಪೂರ್ಣ ಮಾಹಿತಿ ಒದಗಿಸಿದರು.
ಚಿಕ್ಕಮಗಳೂರು ತಾಲೂಕಿನ ಆವತಿ ಹೋಬಳಿಯ ಕೆರೆಮಕ್ಕಿ ಮತ್ತು ಮಲ್ಲಂದೂರು ಗ್ರಾಮದಲ್ಲಿ ಕಾಫಿ, ಕರಿಮೆಣಸು ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ ತಂಡವು ಬೆಳೆಗಾರರೊಂದಿಗೆ ಸಂವಾದ ನಡೆಸಿತು. ಅಲ್ಲಿಂದ ಮಲ್ಲಂದೂರು- ಮುತ್ತೋಡಿ ರಸ್ತೆ ಕುಸಿದ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಅಧ್ಯಯನ ತಂಡವು ರಸ್ತೆ ಹಾನಿಯನ್ನು ಪರಿಶೀಲಿಸಿತು. ನಂತರ ಸಂಗಮೇಶ್ವರ ಪೇಟೆ ದೇವದಾನ ಶಾಲಾ ಕಟ್ಟಡ ಕುಸಿದ ಸ್ಥಳ, ಹರಿಗೆ ವಿದ್ಯುತ್ ಕಂಬ ಬಿದ್ದು ಲೈನ್ ಜಖಂಗೊಂಡ ಸ್ಥಳಗಳಿಗೆ ಭೇಟಿ ನೀಡಿತು. ಬಳಿಕ ಕೊಪ್ಪ ತಾಲೂಕಿನ ಜಯಪುರ ಕೂಳೂರು ಗ್ರಾಮಗಳಲ್ಲಿ ಹಾನಿಗೊಂಡ ಅಡಿಕೆ ತೋಟಗಳಿಗೆ ಕೇಂದ್ರ ಅಧ್ಯಯನ ತಂಡವು ಭೇಟಿ ನೀಡಿ ಹಾನಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿತು.
ಇದೇ ವೇಳೆ ಕೊಗ್ರೆ ಶಾಂತಿನಗರದಲ್ಲಿ ಹಾನಿಗೊಂಡ ಸೇತುವೆಯನ್ನು ಪರಿಶೀಲಿಸಿದ ಕೇಂದ್ರ ತಂಡದ ಅಧಿಕಾರಿಗಳು ಸ್ಥಳೀಯರಿಂದ ಅಹವಾಲು ಆಲಿಸಿತು.