×
Ad

ಜಿಲ್ಲಾದ್ಯಂತ ಮಳೆ ಹಾನಿಯಿಂದ 659 ಕೋ. ರೂ. ನಷ್ಟ: ಚಿಕ್ಕಮಗಳೂರು ಜಿಲ್ಲಾಧಿಕಾರಿ

Update: 2021-12-18 19:27 IST

ಚಿಕ್ಕಮಗಳೂರು, ಡಿ.18: ಜಿಲ್ಲೆಯಲ್ಲಿ ನವೆಂಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ 659 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮಳೆಹಾನಿ ಕುರಿತು ಪರಿಶೀಲನೆಗೆ ಆಗಮಿಸಿರುವ ಕೇಂದ್ರ ಸರಕಾರದ ಅಂತರ್ ಇಲಾಖಾ ಅಧಿಕಾರಿಗಳ ಅಧ್ಯಯನ ತಂಡಕ್ಕೆ ಪ್ರಾತ್ಯಕ್ಷಿಕೆ ಮೂಲಕ ಜಿಲ್ಲೆಯ ಮಳೆಹಾನಿ ಕುರಿತು ವಿವರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನವೆಂಬರ್ ತಿಂಗಳಲ್ಲಿ ಅಕಾಲಿಕ ಮಳೆಯಾಗಿ ವಿವಿಧ ರೀತಿಯ ಮೂಲ ಸೌಕರ್ಯಗಳು ಹಾಗೂ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ. 319 ಮನೆಗಳಿಗೆ ಹಾನಿಯಾಗಿದ್ದು, ಅತಿಯಾದ ಮಳೆಯಿಂದಾಗಿ ವಾಸದ ಮನೆಯೊಳಗೆ ಮಳೆನೀರು ಬಂದ ಪ್ರಕರಣಗಳಿಗೆ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲಾಗಿದೆ ಎಂದರು.

ಮಳೆಯಿಂದಾಗಿ ಕೊಯ್ಲಿಗೆ ಬಂದಿದ್ದ ಮುಂಗಾರು ಬೆಳೆ ಹಾನಿಯಾಗಿ ರೈತರಿಗೆ ತೊಂದರೆಯಾಗಿದೆ. ಜಿಲ್ಲೆಯ ಮುಖ್ಯ ಬೆಳೆಗಳಾದ ಕಾಫಿ, ಭತ್ತ, ರಾಗಿ ಸೇರಿದಂತೆ ವಿವಿಧ ಬೆಳೆಗಳು ನೆಲಕಚ್ಚಿದ್ದು, ಒಟ್ಟಾರೆ ಕೃಷಿ ಮುಂಗಾರು ಬೆಳೆಯಲ್ಲಿ ಕಟಾವಿಗೆ ಬಂದಿದ್ದ ಸುಮಾರು  46,866 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಇದರಿಂದ 582 ಕೋ. ರೂ. ನಷ್ಟವಾಗಿದೆ ಎಂದರು.

ಅಕಾಲಿಕ ಮಳೆಯಿಂದಾಗಿ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆ ಮತ್ತು ಕೆಲವು ಸೇತುವೆಗಳು ಹಾನಿಯಾಗಿದ್ದು, ಅಂದಾಜು ಹಾನಿ ಮೊತ್ತ  72 ಕೋಟಿ ರೂ. ಹಾನಿಯಾಗಿದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ವಿಪತ್ತು ನಿರ್ವಹಣಾ ಯೋಜನೆ ಸಿದ್ಧ ಪಡಿಸಲಾಗಿದೆ. ಇದರಿಂದ ಹಾನಿಯ ತೀವ್ರತೆ ಕಡಿಮೆಯಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ರೂಪಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್, ತೋಟಗಾರಿಕೆ ಉಪನಿರ್ದೇಶಕ ವೇದಮೂರ್ತಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News