×
Ad

ಶಿವಾಜಿ ಪ್ರತಿಮೆಗೆ ಮಸಿ: ಸ್ಥಳದಲ್ಲಿ ಪೊಲೀಸರ ನಿಯೋಜನೆ

Update: 2021-12-18 21:57 IST

ಬೆಂಗಳೂರು, ಡಿ.18: ನಗರದ ಸ್ಯಾಂಕಿ ಕೆರೆಯ ಸಿಗ್ನಲ್ ಬಳಿ ಇರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ. ಈ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಘಟನೆಯಿಂದ ಎಚ್ಚೆತ್ತುಕೊಂಡ ಬೆಂಗಳೂರು ಪೊಲೀಸರು ಸ್ಯಾಂಕಿ ಕರೆ ಸಿಗ್ನಲ್ ಬಳಿ ಇರುವ ಶಿವಾಜಿ ಪ್ರತಿಮೆಗೆ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಭದ್ರತೆಗಾಗಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದು, ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಹಿಂದೂ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಬಳಿದಿರುವ ಘಟನೆ ಖಂಡನೀಯ. ತಾಯ್ನಾಡಿನ ರಕ್ಷಣೆಗಾಗಿ ಹಾಗೂ ಹಿಂದೂಸ್ಥಾನವನ್ನು ಒಗ್ಗೂಡಿಸಲು ಶ್ರಮಿಸಿದ ಹೆಮ್ಮೆಯ ನಾಯಕ ಶಿವಾಜಿ ಮಹಾರಾಜರು. ಆದರೆ ಇಂತಹ ಅಪ್ರತಿಮ ವೀರರ ಪ್ರತಿಮೆಗೆ ಮಸಿ ಬಳಿದಿರುವುದು ಆಪಾದನೀಯ. ಪ್ರಕರಣದ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ನಡೆದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡುತ್ತೇನೆ.
-ಶಶಿಕಲಾ ಜೊಲ್ಲೆ, ಮುಜರಾಯಿ ಖಾತೆ ಸಚಿವೆ

ಅಪರಿಚಿತರ ವಿರುದ್ಧ ಪ್ರಕರಣ ದಾಖಲು, ವಿಶೇಷ ತಂಡ ರಚನೆ 
ಸ್ಯಾಂಕಿ ಕೆರೆಗೆ ಹೊಂದಿಕೊಂಡಿರುವ ಉದ್ಯಾನದಲ್ಲಿ ಶಿವಾಜಿ ಪ್ರತಿಮೆ ಇದೆ. ಗುರುವಾರ ರಾತ್ರಿ ಯಾರೋ ಕಿಡಿಗೇಡಿಗಳು ಉದ್ಯಾನದೊಳಗೆ ನುಗ್ಗಿ ಪ್ರತಿಮೆಗೆ ಮಸಿ ಬಳಿದಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದರು. ಸದ್ಯ ಸ್ಥಳದಲ್ಲಿ ಬಿಗಿ ಭದ್ರತೆ ಇದೆ. ಸಾರ್ವಜನಿಕರು ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೂಡಬಾರದು.
-ಎಂ.ಎನ್. ಅನುಚೇತ್, ಕೇಂದ್ರ ವಿಭಾಗದ ಡಿಸಿಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News