×
Ad

ಭಾಷಾಂಧರ ಕೃತ್ಯವನ್ನು ಕೋಮು ಸಂಘರ್ಷಕ್ಕೆ ತಿರುಗಿಸಲು ಸಿದ್ದರಾಮಯ್ಯ ಯತ್ನ: ಬಿಜೆಪಿ ಆರೋಪ

Update: 2021-12-18 22:52 IST
ಸಿದ್ದರಾಮಯ್ಯ

ಬೆಂಗಳೂರು, ಡಿ.18: ಬೆಳಗಾವಿಯಲ್ಲಿ ಭಾಷಾಂಧರು ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿರುವುದನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಮು ಸಂಘರ್ಷಕ್ಕೆ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ಬೆಳಗಾವಿಯಲ್ಲಿ ಪುಂಡರು ಶಾಂತಿ-ಸೌಹಾರ್ದತೆ ಕದಡುವ ಪ್ರಯತ್ನ ನಡೆಸುತ್ತಿದ್ದಾರೆ. ಎಲ್ಲರೂ ಸಂಯಮ ಹಾಗೂ ಶಾಂತಿ ಕಾಪಾಡುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಮಾತ್ರ ಮೊಸರಿನಲ್ಲೂ ಕಲ್ಲು ಹುಡುಕುತ್ತಿದ್ದಾರೆ. ಭಾಷಾಂಧರು ನಡೆಸಿದ ಕೃತ್ಯವನ್ನು ಕೋಮು ಸಂಘರ್ಷಕ್ಕೆ ಪರಿವರ್ತಿಸಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ಎಲ್ಲದರಲ್ಲೂ ರಾಜಕೀಯ ಹುಡುಕುವುದೇ ಸಿದ್ದರಾಮಯ್ಯ ಅವರ ಚಾಳಿ. ಎಲ್ಲದಕ್ಕೂ ಸಂದರ್ಭ, ಪ್ರಜ್ಞೆ ಎನ್ನುವುದಿರುತ್ತದೆ. ಬೆಳಗಾವಿಯಲ್ಲಿ ದುಷ್ಕರ್ಮಿಗಳು ನಡೆಸಿದ ಪುಂಡಾಟವನ್ನು ಕೋಮು ದ್ವೇಷಕ್ಕೆ ಪರಿವರ್ತಿಸುವ ಇರಾದೆ ಏಕೆ? ನೆರಮನೆಗೆ ಬೆಂಕಿ ಬಿದ್ದಾಗ ಚಳಿ ಕಾಯಿಸಿಕೊಳ್ಳಲು ಹೊರಟ ನಿಮ್ಮ ದುಷ್ಟಬುದ್ಧಿಗೆ ಧಿಕ್ಕಾರ,’ ಎಂದು ಬಿಜೆಪಿ ಹೇಳಿದೆ.

‘ಬೆಳಗಾವಿಯಲ್ಲಿ ಕಿಡಿಗೇಡಿಗಳು ನಡೆಸಿದ ಅಹಿತಕರ ಕೃತ್ಯ ಖಂಡನೀಯವಾದುದು. ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಪ್ರತಿಮೆಗೆ ಅಪಮಾನ ಎಸಗಿದ್ದನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಭಾಷಾ ಸಾಮರಸ್ಯಕ್ಕೆ ಧಕ್ಕೆ ತಂದವರ ವಿರುದ್ಧ ಸರಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ,’ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News