ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನ ಅಸಮರ್ಥರ ಕೈಯಲ್ಲಿದೆ: ಸಚ್ಚಿದಾನಂದಮೂರ್ತಿ ಆರೋಪ
ಬೆಂಗಳೂರು, ಡಿ.18: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವು ಸ್ಥಾಪನೆಯಾಗಿ 46 ವರ್ಷಗಳು ಕಳೆದರೂ, ಅಧ್ಯಕ್ಷ ಸ್ಥಾನವು ಅಸಮರ್ಥರ ಕೈಯಲ್ಲಿರುವ ಕಾರಣ ಮಹಾಸಭಾ ಭ್ರಷ್ಟಾಚಾರದಲ್ಲಿಯೇ ತೊಡಗಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಆರೋಪಿಸಿದ್ದಾರೆ.
ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಅಧ್ಯಕ್ಷರಾಗಿದ್ದಂತಹ 15 ಜನರು ಅರೆಕಾಲಿಕ ಅಧ್ಯಕ್ಷರಾಗಿದ್ದರು. ಹಲವರು ಕೋ-ಆಪರೇಟೀವ್ ಬ್ಯಾಂಕ್‌ಗಳ ಅಧ್ಯಕ್ಷರಾಗಿದ್ದ ಕಾರಣ, ಬ್ಯಾಂಕ್‌ಗಳನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಹಾಗಾಗಿ ಮಹಾಸಭಾದ ಸಾಧನೆ ಶೂನ್ಯವಾಗಿದೆ ಎಂದರು.
ಮಹಾಸಭಾದ ಅಧ್ಯಕ್ಷ ಸ್ಥಾನದಲ್ಲಿರುವವರು ಕೇವಲ ಬುದ್ಧಿವಂತರಾಗಿದ್ದರೆ ಸಾಲದು, ಅಭಿವೃದ್ಧಿಗೆ ಸಮಯಾವಕಾಶ ಕೊಡುವ ವ್ಯಕ್ತಿಯಾಗಿರಬೇಕು ಎಂದ ಅವರು, ಇದುವರೆಗೂ ಅಂತಹ ಅಧ್ಯಕ್ಷರು ಮಹಾಸಭಾಗೆ ಆಯ್ಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣೆಯ ವಿಷಯಕ್ಕೆ ಬಂದರೆ ಬೈಲಾದಿಂದ ಹಿಡಿದು ಮತದಾನ ಪ್ರಕ್ರಿಯೆಯವರೆಗೆ ಎಲ್ಲವೂ ಅವೈಜ್ಞಾನಿಕವಾಗಿಯೆ ರೂಪಿಸಲಾಗಿದೆ. ಬೈಲಾ ಪ್ರಕಾರ ಮಹಾಸಭಾದ ಸಮಾನ್ಯ ಸದಸ್ಯನು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಬೆಂಗಳೂರಿನಲ್ಲಿ ಏಕೈಕ ಮತದಾನ ಕೇಂದ್ರವನ್ನು ಬಸವನಗುಡಿಯ ಶಂಕರಮಠದಲ್ಲಿ ಸ್ಥಾಪಿಸಿಕೊಂಡು, ಅಲ್ಲಿರುವ ಬ್ರಾಹ್ಮಣರಿಗೆ ಮಾತ್ರ ಮತದಾನ ನಡೆಸುವ ಹುನ್ನಾರವಿದೆ. ಇದು ಅವೈಜ್ಞಾನಿಕವಾಗಿದೆ ಎಂದು ಅವರು ತಿಳಿಸಿದರು.