ಎಂಇಎಸ್ ಬೆಳೆಯಲು ಬಿಜೆಪಿ ಕಾರಣ ಎಂಬ ಆರೋಪಕ್ಕೆ ಅರ್ಥವಿಲ್ಲ : ಮಾಜಿ ಸಿಎಂ ಯಡಿಯೂರಪ್ಪ
ಶಿವಮೊಗ್ಗ : ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಕೆಲವರು ಗಲಭೆ ಸೃಷ್ಟಿಸುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ ಪುತ್ಥಳಿ ಹಾಳು ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಶಿಬಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುತ್ಥಳಿ ವಿಚಾರವಾಗಿ ನಾಳೆ ವಿಧಾನ ಮಂಡಲದಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ಮಾಡುತ್ತೇವೆ. ಈ ರೀತಿ ಘಟನೆಗಳು ಮರುಕಳಿಸದಂತೆ ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ. ಅಪರಾಧಿಗಳು ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದರು.
ಎಂಇಎಸ್ ಈ ಮಟ್ಟಿಗೆ ಬೆಳೆಯಲು ಹಿಂದೆ ಬಿಜೆಪಿ ನೀಡಿದ್ದ ಬೆಂಬಲವೇ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಎಸ್ ವೈ, ಯಾರೋ ಕೆಲವರು ವಾಸ್ತವಿಕ ಸತ್ಯ ಸಂಗತಿಗಳು ತಿಳಿಯದವರು ಮಾಡಿದ ಆರೋಪಕ್ಕೆ ಅರ್ಥವಿಲ್ಲ. ಯಾರೇ ಅಪರಾಧ ಮಾಡಿದರೂ ಕ್ಷಮಿಸುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದವರ ಮೇಲೆ ಕ್ರಮ ಜರುಗಿಸಿ ಜೈಲಿಗೆ ಕಳುಹಿಸಿರುವುದೇ ಇದಕ್ಕೆ ಉದಾಹರಣೆ ಎಂದರು.
ಘಟನೆ ಬಗ್ಗೆ ಸಿಎಂ ಬೊಮ್ಮಾಯಿ ಅವರು ಕಠಿಣ ಕ್ರಮ ಜರುಗಿಸುವಂತೆ ಗೃಹ ಸಚಿವರಿಗೆ ಸೂಚಿಸಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ 23 ಜನರನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ.ಈ ಘಟನೆಯಲ್ಲಿ ಇನ್ನೂ ಯಾರು ಯಾರು ಶಾಮೀಲಾಗಿದ್ದಾರೆಯೋ ಅವರನ್ನು ಬಂಧಿಸುವ ಕೆಲಸ ಮುಂದುವರಿಯುತ್ತದೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ.ಈ ಬಗ್ಗೆ ಸಿಎಂ ಕೇಳಬೇಕು.ನನಗೆ ಗೊತ್ತಿರುವಂತೆ ಇದುವರೆಗೆ ಸಚಿವ ಸಂಪುಟ ವಿಸ್ತರಣೆಯ ಯಾವುದೇ ಸುದ್ದಿಗಳು ಇಲ್ಲ ಎಂದು ಹೇಳಿದರು.
ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಅದು ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬಿಟ್ಟ ವಿಚಾರ ಎಂದರು.
ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಿ ಎಸ್ ವೈ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ಪರಿಷತ್‌ನಲ್ಲೂ ನಮಗೆ ಬಹುಮತ ಸಿಗುತ್ತದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದೇ ತರುತ್ತೇವೆ ಎಂದರು.