ಶಿಗ್ಗಾವಿಯಲ್ಲಿ ಗದ್ಗದಿತರಾದ ಸಿಎಂ ಬೊಮ್ಮಾಯಿ ಹೇಳಿದ್ದೇನು?

Update: 2021-12-19 15:34 GMT

ಹಾವೇರಿ, ಡಿ.19: ನಮ್ಮ ಬದುಕು ಶಾಶ್ವತವಲ್ಲ. ಎಷ್ಟು ದಿನ ಋಣ ಇರುತ್ತದೆಯೋ ಅದೂ ಗೊತ್ತಿಲ್ಲ. ಅದೇ ರೀತಿ ಸ್ಥಾನಮಾನ ಕೂಡ ಶಾಶ್ವತವಲ್ಲ. ಕ್ಷೇತ್ರದ ಹೊರಗಡೆ ಮಾತ್ರ ನಾನು ಸಿಎಂ. ಶಿಗ್ಗಾವಿ–ಸವಣೂರ ಕ್ಷೇತ್ರದ ಒಳಗಡೆ ಬಂದಾಗ ನಾನು ಕೇವಲ ಬಸವರಾಜ ಬೊಮ್ಮಾಯಿಯಾಗಿ ಉಳಿಯುತ್ತೇನೆ. ಹೆಸರಿನ ಹಿಂದೆ ಇರುವ ಪದನಾಮಗಳು ಶಾಶ್ವತವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾಗಿ ನುಡಿದಿದ್ದಾರೆ.  

ರವಿವಾರ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಕಂಚಿನ ಪುತ್ಥಳಿ ಅನಾವರಣ ಮತ್ತು ಪಂಚಮಸಾಲಿ ಸಮುದಾಯ ಭವನದ ಕಾಮಗಾರಿಗೆ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ನಿಮ್ಮ ಆಶೀರ್ವಾದದಿಂದ ಈ ರಾಜ್ಯದ ಸಿಎಂ ಆಗಲು ಕಾರಣವಾಗಿದೆ. ನಾನು ನಿಮ್ಮೂರಿಗೆ ಬಂದಾಗ ರೊಟ್ಟಿ ತಿನ್ನಿಸಿದ್ದೀರಿ, ನವಣೆ ಅಕ್ಕಿ ಅನ್ನ ಮಾಡಿ ಹಾಕಿದ್ದೀರಿ. ಆ ಋಣ ತೀರಿಸಲು ಆಗೋದಿಲ್ಲ ಎಂದು ಬೊಮ್ಮಾಯಿ ಕೆಲಕ್ಷಣ ಗದ್ಗದಿತರಾದರು.

ನನಗೆ ಬಹಳ ದೊಡ್ಡ ಆಸೆಯಿಲ್ಲ. ನಿಮ್ಮ ಪ್ರೀತಿ, ವಿಶ್ವಾಸದ ಮುಂದೆ ಯಾವ ಅಧಿಕಾರ ಕೂಡ ದೊಡ್ಡದಲ್ಲ. ಭಾವನಾತ್ಮಕವಾಗಿ ಮಾತನಾಡಬಾರದು ಎಂದು ಅನಿಸಿದರೂ ನಿಮ್ಮನ್ನು ನೋಡಿದಾಗ ಭಾವನೆಗಳು ಉಕ್ಕಿ ಬರುತ್ತಿವೆ. ದೊಡ್ಡ ಜವಾಬ್ದಾರಿ ಹೆಗಲ ಮೇಲೆ ಇದೆ. ಎಲ್ಲ ಸಮುದಾಯಗಳ ಭಾವನೆಗಳಿಗೆ ಸ್ಪಂದಿಸಬೇಕಿದೆ. ಸರಕಾರಕ್ಕೆ ಹಲವಾರು ಸವಾಲುಗಳಿವೆ. ಅವುಗಳನ್ನು ಎದುರಿಸಿ ಜಯ ಗಳಿಸಬೇಕಿದೆ. ಜನರ ಆಶೀರ್ವಾದದಲ್ಲಿ ದೊಡ್ಡ ಶಕ್ತಿಯಿದೆ ಎಂದು ಹೇಳಿದರು. 

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ ಎಂಬ ಹಕ್ಕೊತ್ತಾಯಕ್ಕೆ ಸಂಬಂಧಿಸಿದಂತೆ, ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂಪೂರ್ಣ ಸಹಕಾರ ನೀಡಿ, ಧ್ವನಿ ಇಲ್ಲದವರಿಗೆ, ತುಳಿತಕ್ಕೆ ಒಳಗಾದವರಿಗೆ ಧ್ವನಿ ನೀಡಲು ಬದ್ಧನಾಗಿದ್ದೇನೆ. ಎಲ್ಲ ಸಮುದಾಯಗಳಿಗೂ ಪ್ರಾಶಸ್ತ್ಯ ನೀಡಿ, ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. 

ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಬಸವರಾಜ ಬೊಮ್ಮಾಯಿ ಮತ್ತು ತಮ್ಮದು ಮೂರು ದಶಕಗಳ ಸ್ನೇಹ. ಅವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುತ್ತಾರೆ. ಅವರ ತಂದೆ ಎಸ್.ಆರ್. ಬೊಮ್ಮಾಯಿ ಕೇಂದ್ರ ಮಂತ್ರಿಯಾದ ರೀತಿ ಪುತ್ರ ಬೊಮ್ಮಾಯಿ ಕೂಡ ಕೇಂದ್ರ ಮಂತ್ರಿ ಆಗಲಿದ್ದಾರೆ ಎಂದರು. 

ಈ ಮಾತಿಗೆ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿ, ಬೊಮ್ಮಾಯಿ ಅವರು ಕೇಂದ್ರ ಮಂತ್ರಿಯಾಗುವ ಅವಶ್ಯವಿಲ್ಲ. ಅವರು 2023ರ ನಂತರವೂ ಮುಖ್ಯಮಂತ್ರಿಯಾಗಿಯೇ ಮುಂದುವರಿಯಲಿ ಎಂದು ಆಶಿಸಿದರು. ಇದಕ್ಕೆ ತಕ್ಷಣ ಮುರುಗೇಶ ನಿರಾಣಿ, ನನ್ನ ಮಾತನ್ನು ಶ್ರೀಗಳು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಬೊಮ್ಮಾಯಿ ಈಗ ಕೇಂದ್ರ ಮಂತ್ರಿಯಾಗುತ್ತಾರೆ ಎಂದು ಹೇಳಲಿಲ್ಲ. ಮುಂದೆ ಕೇಂದ್ರ ಮಂತ್ರಿಯಾಗುವ ಯೋಗವಿದೆ ಎಂದು ಹೇಳಿದೆ ಎಂದು ಸಮಜಾಯಿಷಿ ನೀಡಿದರು. 

ಕೆಲದಿನಗಳಿಂದ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂಬ ಗುಸುಗುಸು ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದು, ಸಭೆಯಲ್ಲಿ ನಾಯಕರು ಆಡಿದ ಮಾತುಗಳು ಅದಕ್ಕೆ ಪುಷ್ಪಿ ನೀಡುವಂತಿದ್ದವು. ಬೊಮ್ಮಾಯಿ ಆಡಿದ ನೋವಿನ ನುಡಿಗಳು ಕೂಡ ಸಿಎಂ ಬದಲಾವಣೆಯ ಸೂಚನೆ ಇರಬಹುದು ಎಂಬ ಚರ್ಚೆಗಳು ಜನರ ಮಧ್ಯೆ ಕೇಳಿಬಂದವು.

ಬೊಮ್ಮಾಯಿ ಕೇಂದ್ರ ಸಚಿವರಾಗಲಿದ್ದಾರೆ

‘ಬಸವರಾಜ ಬೊಮ್ಮಾಯಿ ಮತ್ತು ತಮ್ಮದು ಮೂರು ದಶಕಗಳ ಸ್ನೇಹ. ಅವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುತ್ತಾರೆ. ಅವರ ತಂದೆ ಎಸ್.ಆರ್. ಬೊಮ್ಮಾಯಿ ಕೇಂದ್ರ ಮಂತ್ರಿಯಾದ ರೀತಿ ಪುತ್ರ ಬೊಮ್ಮಾಯಿ ಕೂಡ ಕೇಂದ್ರ ಮಂತ್ರಿ ಆಗಲಿದ್ದಾರೆ.’ 

-ಮುರುಗೇಶ ನಿರಾಣಿ, ಬೃಹತ್ ಕೈಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News