ಕೋವಿಡ್ ಬಾಧಿತ ವಕೀಲರಿಗೆ ನೆರವಿಗೆ ಇನ್ನೂ ಸ್ಪಂದಿಸದ ಕೇಂದ್ರ: ಸಿಜೆಐ ರಮಣ

Update: 2021-12-19 17:38 GMT

ವಾರಂಗಲ್ (ತೆಲಂಗಾಣ),ಡಿ.19: ನ್ಯಾಯಾಂಗ ಮೂಲಸೌಕರ್ಯ ನಿಗಮದ ಸ್ಥಾಪನೆ ಮತ್ತು ಕೋವಿಡ್ ಸಾಂಕ್ರಾಮಿಕದಿಂದಾಗಿ ಜೀವನೋಪಾಯವನ್ನು ಕಳೆದುಕೊಂಡಿರುವ ವಕೀಲರಿಗೆ ಹಣಕಾಸು ನೆರವು ಒದಗಿಸುವಂತಹ ವಿಷಯಗಳಿಗೆ ಕೇಂದ್ರ ಸರಕಾರವು ಇನ್ನೂ ಸ್ಪಂದಿಸಿಲ್ಲ ಎಂದು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎನ್.ವಿ.ರಮಣ ಅವರು ರವಿವಾರ ತಿಳಿಸಿದರು. ಇಲ್ಲಿ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು,ಈ ವರ್ಷದ ಆರಂಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಾಲ ಸೌಲಭ್ಯಗಳ ಸ್ಥಾಪನೆಗಾಗಿ ಪ್ರಸ್ತಾವವನ್ನು ಸಹ ಕಳುಹಿಸಲಾಗಿತ್ತು,ಆದರೆ ಈವರೆಗೆ ಏನೂ ಆಗಿಲ್ಲ ಎಂದು ಹೇಳಿದರು. ಹಾಲಿ ಪ್ರಗತಿಯಲ್ಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ನ್ಯಾಯಾಂಗ ಮೂಲಸೌಕರ್ಯ ನಿಗಮದ ರಚನೆಗಾಗಿ ಶಾಸನವೊಂದನ್ನು ಕೇಂದ್ರವು ತರುತ್ತದೆ ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು.

‘ಕೋವಿಡ್‌ನಿಂದಾಗಿ ಜೀವನೋಪಾಯವನ್ನು ಕಳೆದುಕೊಂಡಿರುವ ವಕೀಲರ ಕುಟುಂಬಗಳಿಗೆ ಹಣಕಾಸು ನೆರವಿಗಾಗಿ ನಾನು ಕೇಂದ್ರವನ್ನು ಕೋರಿದ್ದೆ. ಸರಕಾರವು ಅದಕ್ಕೆ ಈವರೆಗೆ ಸೂಕ್ತವಾಗಿ ಪ್ರತಿಕ್ರಿಯಿಸಿಲ್ಲ. ಮೂಲಸೌಕರ್ಯಗಳ ಸೃಷ್ಟಿಗೆ ಸಂಬಂಧಿಸಿದಂತೆಯೂ ಅದು ಸ್ಪಂದಿಸಿಲ್ಲ. ಪ್ರಧಾನಿ ಮತ್ತು ರಾಷ್ಟ್ರಪತಿಗಳು ಉಪಸ್ಥಿತರಿರುವ ವಿವಿಧ ವೇದಿಕೆಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲ ನಾನು ಈ ವಿಷಯಗಳನ್ನು ಪ್ರಸ್ತಾಪಿಸುತ್ತಲೇ ಇರುತ್ತೇನೆ ’ ಎಂದು ನ್ಯಾ.ರಮಣ ಹೇಳಿದರು.

ಕಾನೂನು ಸಚಿವ ಕಿರಣ ರಿಜಿಜು ಅವರು ಇತ್ತೀಚಿಗೆ ಲೋಕಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ, ನ್ಯಾಯಾಲಯಗಳಲ್ಲಿ ಮೂಲಸೌಕರ್ಯಗಳ ವ್ಯವಸ್ಥೆಗಾಗಿ ಭಾರತೀಯ ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ನಿಗಮದ ಸ್ಥಾಪನೆಗಾಗಿ ಸಿಜೆಐ ಅವರಿಂದ ಪ್ರಸ್ತಾವವೊಂದನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದರು.

‘ಪ್ರಾಥಮಿಕ ಮೂಲಸೌಕರ್ಯಗಳ ಕೊರತೆ, ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಅರ್ಹ ವಕೀಲರಿಗೆ ಹಣಕಾಸು ನೆರವು ಒದಗಿಸುವುದು ಇವು ದೇಶದಲ್ಲಿಯ ಮೂರು ಮುಖ್ಯ ಸಮಸ್ಯೆಗಳಾಗಿವೆ. ಈ ಸಮಸ್ಯೆಗಳನ್ನು ನಿವಾರಿಸಿದರೆ ಮಾತ್ರ ನಾವು ಜನರನ್ನು ತಲುಪಬಹುದು’ ಎಂದರು.

ಬಾಕಿಯಿರುವ ಪ್ರಕರಣಗಳು ಹೆಚ್ಚುತ್ತಿರುವ ಕುರಿತಂತೆ ನ್ಯಾ.ರಮಣ,ಇದಕ್ಕೆ ನ್ಯಾಯಾಧೀಶರ ಕೊರತೆ ಮಾತ್ರವಲ್ಲ,ಅಗತ್ಯ ಮೂಲಸೌಕರ್ಯದ ಕೊರತೆಯೂ ಕಾರಣವಾಗಿದೆ. ನ್ಯಾಯಾಧೀಶರು ಮತ್ತು ವಕೀಲರಿಗೆ ಸಾಕಷ್ಟು ಸೌಲಭ್ಯಗಳನ್ನೊದಗಿಸದೆ ಶಿಥಿಲ ಕಟ್ಟಡಗಳಲ್ಲಿ ಕುಳಿತುಕೊಂಡು ಅವರು ನ್ಯಾಯವನ್ನು ಒದಗಿಸಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ಸರಕಾರಗಳು, ವಿಶೇಷವಾಗಿ ಕೇಂದ್ರ ಇದನ್ನು ಗಮನಿಸಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿಯ ವಕೀಲರು ವರ್ಚುವಲ್ ಆಗಿ ನ್ಯಾಯಾಲಯಗಳಿಗೆ ಹಾಜರಾಗಲು ಅನುಕೂಲವಾಗುವಂತೆ ವ್ಯಾನ್‌ಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸ್ಥಾಪನೆಗಾಗಿ ಕೋರಿ ತಾನು ಕೇಂದ್ರ ಮತ್ತು ಕಾನೂನು ಸಚಿವರಿಗೆ ಪತ್ರ ಬರೆದಿದ್ದೇನೆ. ನಗರಗಳು ಮತ್ತು ಪಟ್ಟಣಗಳಲ್ಲಿಯ ವಕೀಲರಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಗಳಿಗೆ ಹಾಜರಾಗಲು ಸಾಧ್ಯವಿದೆಯಾದರೂ ಗ್ರಾಮೀಣ ಪ್ರದೇಶಗಳಲ್ಲಿಯ ವಕೀಲರು ನೆಟ್‌ವರ್ಕ್ ಕೊರತೆಯಿಂದಾಗಿ ಅಂತಿಮವಾಗಿ ತಮ್ಮ ವೃತ್ತಿಯನ್ನೇ ಕಳೆದುಕೊಳ್ಳುತ್ತಾರೆ ಎಂದ ನ್ಯಾ.ರಮಣ,ಅವರು ನ್ಯಾಯಾಲಯಗಳಲ್ಲಿ ವರ್ಚುವಲ್ ಆಗಿ ಹಾಜರಾಗುವಂತಾಗಲು ಸರಕಾರವು ಕಾರ್ಪೊರೇಟ್ ಹೊಣೆಗಾರಿಕೆ ನಿಧಿಗಳಡಿ ನೆಟ್‌ವರ್ಕ್ ಕೇಂದ್ರಗಳನ್ನು ಸ್ಥಾಪಿಸಲು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳನ್ನು ತೊಡಗಿಸಿಕೊಳ್ಳಬಹುದು. ಈವರೆಗಿನ ಸಲಹೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಈ ಬಗ್ಗೆ ಸರಕಾರವು ಏನನ್ನಾದರೂ ಮಾಡುವುದನ್ನು ತಾನು ಕಾಯುತ್ತಿದ್ದೇನೆ ಎಂದರು.

ನ್ಯಾಯಾಲಯ ಸಂಕೀರ್ಣಗಳ ನಿರ್ಮಾಣಕ್ಕಾಗಿ ಹಣಕಾಸು ಒದಗಿಸಲು ಹಲವಾರು ರಾಜ್ಯಗಳು ಹಿಂದೇಟು ಹೊಡೆಯುತ್ತಿವೆ ಎಂದ ನ್ಯಾ.ರಮಣ,ಕೇಂದ್ರ ಸರಕಾರದ ಹಣಕ್ಕಾಗಿ ಕಾಯದೆ ಇಲ್ಲಿ ನ್ಯಾಯಾಲಯ ಸಂಕೀರ್ಣದ ನಿರ್ಮಾಣಕ್ಕೆ ಹಣಕಾಸನ್ನು ಮಂಜೂರು ಮಾಡಿದ್ದಕ್ಕಾಗಿ ತೆಲಂಗಾಣ ಸರಕಾರವನ್ನು ಪ್ರಶಂಸಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News