×
Ad

ಸಕಲೇಶಪುರ: ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರೈತ

Update: 2021-12-19 23:59 IST

ಸಕಲೇಶಪುರ: ಪಶ್ಚಿಮಘಟ್ಟದ ಅಂಚಿನ ರೈತರೊಬ್ಬರು  ರೆವಿನ್ಯೂ ಇನ್‌ಸ್ಪೆಕ್ಟರ್‌ ಮತ್ತು ಸರ್ವೆಯರ್‌ ಅಕ್ರಮ ಖಾತೆ ಹಾಗೂ ಪೋಡ್‌ ಮಾಡಿರುವ ವಿರುದ್ಧ ಸುಪ್ರಿಂ ಕೋರ್ಟ್‌ನಲ್ಲಿ ದಾವೆ ಹೂಡಿರುವ ಪ್ರಕರಣವೊಂದು ತಾಲೂಕಿನ ಹೆಗ್ಗದ್ದೆ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಹೆಗ್ಗದ್ದೆ ಗ್ರಾಮದ ಸರ್ವೆ ನಂಬರ್‌ 340/1ರಲ್ಲಿ  3.33 ಎಕರೆ ಭೂಮಿ ದಿವಂಗದ ಮಲ್ಲೇಗೌಡ ಅವರ ಹೆಸರಿನಲ್ಲಿತ್ತು. ಅವರ ನಾಲ್ಕು ಮಂದಿ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳ ಇವರ ಹೇಳಿಕೆ ಪಡೆಯದೆ,  ಕುಟುಂಬಸ್ಥರ ಒಪ್ಪಿಗೆ ಇಲ್ಲ ಎಂದು ಗ್ರಾಮ ಲೆಕ್ಕಿಗ ವರದಿ ನೀಡಿದರೂ ಸಹ, ರೆವಿನ್ಯೂ ಇನ್‌ಸ್ಪೆಕ್ಟರ್ ಆಗಿದ್ದ ಈಶ್ವರ್,  ಕೆ.ಎಂ. ಪುಟ್ಟಸ್ವಾಮಿಗೌಡ ಹೆಸರಿಗೆ ಅಕ್ರಮವಾಗಿ ಪೌತಿ ಖಾತೆ ಮಾಡಿದ್ದಾರೆ. ಖಾತೆ ಮಾಡಿದ ಮೇಲೆ ಕುಟುಂಬಸ್ಥರಿಗೆ ನೋಟೀಸ್‌ ಜಾರಿ ಮಾಡದೆ, ಸರ್ವೆಯರ್‌ ಆಗಿದ್ದ  ಕುಬೇರ ನಾಯ್ಕ, ಕೆ.ಎಂ. ಮಲ್ಲೇಶ್‌ ಅವರ ಸಹಿ ನಕಲಿ ಮಾಡಿ, ಪೋಡ್‌ ಸಹ ಮಾಡಿದ್ದಾರೆ. ಈ ಪ್ರಕರಣದಲ್ಲಿ ಕುಬೇರ ನಾಯ್ಕ ಅಮಾನತ್ತಿನಲ್ಲಿದ್ದಾರೆ.

ಈ ಅಕ್ರಮ ಖಾತೆ ವಿರುದ್ಧ ಕೆ.ಎಂ. ಮಲ್ಲೇಶ್‌ ಅವರು 2019ರಲ್ಲಿ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ. ಅದೇ ಸಂದರ್ಭದಲ್ಲಿ ಅಕ್ರಮ ಖಾತೆ ಮಾಡಿಕೊಟ್ಟ ರೆವಿನ್ಯೂ ಇನ್‌ಸ್ಪೆಕ್ಟರ್‌ ಈಶ್ವರ್‌, ಖಾತೆ ಮಾಡಿಸಿಕೊಂಡ ಕೆ.ಎಂ. ಪುಟ್ಟಸ್ವಾಮಿಗೌಡ ಹಾಗೂ ಇತರರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ  ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ದೂರು ನೀಡಲಾಗುತ್ತದೆ. ಆದರೆ ಪೊಲೀಸರು ಎಫ್‌ಐಆರ್ ದಾಖಲಿಸದೆ ಇದ್ದ ಕಾರಣ, ಅವರ ದೂರಿನ ಮೇರೆಗೆ  ಕೂಡಲೆ ಎಫ್ಐಆರ್ ದಾಖಲಿಸುವಂತೆ ಡಿವೈಎಸ್‌ಪಿ ಸೂಚನೆ ನೀಡುತ್ತಾರೆ. ಆದರೂ ಸಹ ಅಂದಿನ ಪಿಎಸ್‌ಐ ಎಫ್‌ಐಆರ್‌ ದಾಖಲಿಸುವುದಿಲ್ಲ. ನಂತರ ಸ್ಥಳೀಯ ಸಿವಿಲ್‌ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗುತ್ತದೆ.

ಪೊಲೀಸರ ನಿರ್ಲಕ್ಷ್ಯಕ್ಕೆ ಹೈಕೋರ್ಟ್‌ನಲ್ಲಿ ಎಫ್‌ಐಆರ್‌ ವಜಾ:

ಎಫ್‌ಐಆರ್‌ ದಾಖಲಾದರೂ ಪೊಲೀಸರು ತನಿಖೆ ವಿಳಂಭ ಮಾಡಿದ ಕಾರಣ, ಮಲ್ಲೇಶ್‌ ಅವರ ಪುತ್ರ  ಕೆ.ಎಂ. ಅಶೋಕ್‌ ಅಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡುತ್ತಾರೆ.  ಆರೋಪಿಗಳನ್ನು ಬಂಧಿಸಿ 28 ದಿನಗಳ ಒಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಇನ್‌ಸ್ಪೆಕ್ಟರ್‌ಗೆ ಎಸ್‌ಪಿ ಸೂಚಿಸುತ್ತಾರೆ. ಎಸ್‌ಪಿ ಸೂಚನೆಯನ್ನೂ ಸಹ ಪರಿಗಣಿಸದೆ ತನಿಖೆ ವಿಳಂಬ ಮಾಡಿದ ಕಾರಣ, ಆರೋಪಿತರು ರಾಜ್ಯ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದು, ಎಫ್‌ಐಆರ್‌ ವಜಾಗೊಳ್ಳುತ್ತದೆ.

ಪ್ರಧಾನಿಗೆ ಪತ್ರ: ನ್ಯಾಯಕ್ಕಾಗಿ 2021ರ ಜನವರಿಯಲ್ಲಿ  ಪ್ರಧಾನ ಮಂತ್ರಿಗೆ ಪತ್ರ ಬರೆಯಲಾಗುತ್ತದೆ. ವಿಚಾರಣೆ ಮಾಡಿ ವರದಿ ನೀಡುವಂತೆ ಪ್ರಧಾನಿ ಕಚೇರಿಯಿಂದ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಕಚೇರಿಗೆ ಸೂಚನೆ ಬಂದು, 11 ತಿಂಗಳಾದರೂ ಪ್ರತ್ಯುತ್ತರ ಬರಲಿಲ್ಲ. ಅಂತಿಮವಾಗಿ ಸುಪ್ರಿಂ ಕೋರ್ಟ್‌ ಮೆಟ್ಟಿಲು ಹತ್ತಲು ನಿರ್ಧರಿಸಬೇಕಾಯಿತು. ಸುಪ್ರಿಂ ಕೋರ್ಟ್‌ನಲ್ಲಿ ಇವರುಗಳ ವಿರುದ್ಧ  2021ರ ಅಕ್ಟೋಬರ್‌ 21ರಂದು ಎಸ್‌ಎಲ್‌ಪಿ  ಪ್ರಕರಣ ದಾಖಲಾಗಿದೆ. ಸುಪ್ರಿಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ನೋಟೀಸ್‌ ಜಾರಿ ಮಾಡಿದೆ ಎಂದು  ಮಲ್ಲೇಶ್‌ ಅವರ ಪುತ್ರ ಕೆ.ಎಂ. ಅಶೋಕ್‌ ತಿಳಿಸಿದರು.

ಹಿಂದಿನ ಉಪವಿಭಾಗಾಧಿಕಾರಿ ಅವರು ಸಹ ಅವರ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಈ ವಿವಾದದ ಮೇಲ್ಮನವಿಯನ್ನು ಎರಡು ವರ್ಷ ವಿಳಂಬ ಮಾಡಿದ್ದಲ್ಲದೆ, ಸದರಿ ಈಶ್ವರ ಮೇಲೆ ನಾನು ಸಲ್ಲಿಸಿದ್ದ ಅರ್ಜಿಯ ವಿಚಾರಣಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸದೆ ತಾತ್ಕಾಲಿಕವಾಗಿ ಮುಕ್ತಾಯಗೊಳಿಸಿದ್ದರು.

ಖಾತೆ ರದ್ದು ಪಡಿಸಿದ ಎಸಿ ಪ್ರತೀಕ್ ಬಯಾಲ್

ಈಗಿನ  ಉಪವಿಭಾಗಾಧಿಕಾರಿ ಪ್ರತೀಕ್‌ ಬಯಾಲ್‌ ಅವರಲ್ಲಿ ಪ್ರಕರಣದ ವಿದ್ಯಾಮಾನ ಹೇಳಿಕೊಂಡಾಗ, ಅವರು ನಿಯಮಾನುಸಾರ ಮೇಲ್ಮನವಿಯನ್ನು ವಿಚಾರಣೆ ಮಾಡಿ, ಅಕ್ರಮ ಖಾತೆಯನ್ನು   25–11–2021ರಂದು ರದ್ದುಗೊಳಿಸಿದ್ದಾರೆ.  ಅಲ್ಲದೆ ಈಶ್ವರ್‌ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಹಿಂದಿನ ಉಪವಿಭಾಗಾಧಿಕಾರಿ ತಾತ್ಕಾಲಿಕ ಮುಕ್ತಾಯಗೊಳಿಸಿದ್ದನ್ನು ತೆರವುಗೊಳಿಸಿ,  ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ಕ್ರಮ ಕೈಗೊಂಡಿದ್ದಾರೆ. ಇದೇ ಅಧಿಕಾರಿ ಎರಡು ವರ್ಷಗಳ ಹಿಂದೆ ಇದ್ದಿದ್ದರೆ ಪ್ರಕರಣ ಅಂದೇ ಅಂತ್ಯ ಕಾಣಲಿತ್ತು ಎಂದು ಅಶೋಕ್‌ ಹೇಳಿದರು.

ಉಪವಿಭಾಗಾಧಿಕಾರಿ ಮಟ್ಟದಲ್ಲಿ ಇತ್ಯರ್ಥಗೊಳ್ಳಬೇಕಾಗಿದ್ದ  ಒಂದು ಸಣ್ಣ ಪ್ರಕರಣಕ್ಕೆ ಹಳ್ಳಿಯ ರೈತ ಲಕ್ಷಾಂತರ ರೂಪಾಯಿ ಹಣ. ಸಮಯ, ಮಾನಸಿಕ, ನೆಮ್ಮದಿ ಕಳೆದುಕೊಂಡು, ಬೆದರಿಕೆ ಎದುರಿಸಿ ಅಂತಿಮವಾಗಿ ಸುಪ್ರಿಂ ಕೋರ್ಟ್‌ ಮೆಟ್ಟಿಲು ಹತ್ತಬೇಕಾದ ವ್ಯವಸ್ಥೆ ತಾಲ್ಲೂಕಿನಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News