×
Ad

ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ನಿರ್ದೇಶಕ ಕವಿರಾಜ್ ಒತ್ತಾಯ

Update: 2021-12-20 12:53 IST
photo - Facebook (ನಿರ್ದೇಶಕ ಕವಿರಾಜ್)

ಬೆಂಗಳೂರು: 'ಮೊದಲಿಗೆ ಬೆರಳೆಣಿಕೆಯಷ್ಟು ಕಿಡಿಗೇಡಿಗಳು ಹಚ್ಚಿದ ಕಿಡಿ ಇಡೀ ಎರಡು ರಾಜ್ಯಗಳ ಶಾಂತಿ , ಸೌಹಾರ್ದ ಭಂಗಗೊಳಿಸುವ ಮಟ್ಟಕ್ಕೆ ತಲುಪಿದ ಪರಿಸ್ಥಿತಿ ಬಗ್ಗೆ ವಿಷಾದವಿದೆ. ನಮ್ಮ ನಮ್ಮಲ್ಲೇ ಬಡಿದಾಡಿಕೊಳ್ಳುವ ಹಾಗಾಯಿತಲ್ಲ ಎಂಬ ನೋವಿದೆ' ಎಂದು ಗೀತ ರಚನೆಕಾರ, ನಿರ್ದೇಶಕ ಕವಿರಾಜ್ ಹೇಳಿದ್ದಾರೆ.

ಕವಿರಾಜ್ ಅವರ ಫೇಸ್ ಬುಕ್ ಪೋಸ್ಟ್ ಹೀಗಿದೆ...

ಇದಕ್ಕೆಲ್ಲಾ ಮೂಲ ಕಾರಣ ಕನ್ನಡ ನೆಲದಲ್ಲಿದ್ದು , ಕನ್ನಡ , ಕನ್ನಡಿಗರನ್ನು ಗೌರವಿಸಿ ಸೌಹಾರ್ದತೆಯಿಂದ ಬಾಳದೇ ಪದೇ ಪದೇ ಕನ್ನಡಿಗರನ್ನೇ ಕೆಣಕುವ ಎಂಇಎಸ್ ಸಂಘಟನೆಯ ದುರ್ನಡತೆಯೇ. ವಿಧಾನಸಭಾ ಅಧಿವೇಶನ ನಡೆಯುವ ಹೊತ್ತಲ್ಲೇ ಎಂಇಎಸ್ ಅನುಮತಿಯಿಲ್ಲದೆ 'ಮಹಾಮೇಳಾವ ನಡೆಸಲು ಹೊರಟಿದ್ದೇ ಪ್ರಸ್ತುತ ಸ್ಥಿತಿಗೆ ಪ್ರಚೋದನೆ ನೀಡಿದ್ದು. 

ತಿಳಿದು ತಿಳಿದೂ ಕನ್ನಡಿಗರನ್ನು ಕೆಣಕುವುದರ ಹಿಂದೆ ಷಡ್ಯಂತ್ರಗಳು ,ದುಷ್ಟ ಹಿತಾಸಕ್ತಿಗಳು ಇರುವುದು ಸ್ಪಷ್ಟ . ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ನಂತರ , ರಾಯಣ್ಣನ ಪ್ರತಿಮೆ ವಿರೂಪಗೊಳಿಸಿದ ನಂತರ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನೀಡದೆ ಕನ್ನಡ ಪರ ಸಂಘಟನೆಗಳು ಶಾಂತಿ ಮಂತ್ರ ಪಠಿಸುತ್ತಾ ಸುಮ್ಮನೆ ಕೂರುವುದು ಸಾಧ್ಯವು ಇರಲಿಲ್ಲ.ಈ ಹೊತ್ತಿನಲ್ಲಿ ಅಲ್ಲಿನ ಕನ್ನಡಿಗರಿಗೆ ಸ್ಥೈರ್ಯ ತುಂಬಲು , ಪದೇ ಪದೇ ಅನುಚಿತ ಪ್ರಚೋದನೆಗಳಿಂದ ಶಾಂತಿ ಕದಡುವ ಎಂಇಎಸ್ ಸಂಘಟನೆ ಮತ್ತು ಅದರ ಪುಂಡ ಕಾರ್ಯಕರ್ತರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಓಟಿನ ಆಸೆಯಿಂದ ಮೀನಾಮೇಷ ಎಣಿಸುತ್ತಿರುವ ಸರ್ಕಾರ ಮತ್ತು ಗಟ್ಟಿಯಾಗಿ ಎಂಇಎಸ್ ವಿರುದ್ಧ ದನಿಯೆತ್ತಲು ಹಿಂಜರಿಯುತ್ತಿರುವ ಎಲ್ಲಾ ಪಕ್ಷಗಳ  ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಲು ಬೆಳಗಾವಿ ಚಲೋ  ನಡೆಸಿರುವ ಅವರ ಬದ್ಧತೆಗೆ , ತಾಕತ್ತಿಗೆ ಮೆಚ್ಚುಗೆ ಮತ್ತು ಬೆಂಬಲ ವ್ಯಕ್ತಪಡಿಸುತ್ತೇನೆ . ಇನ್ನು ದೇಶ , ಧರ್ಮ ,ಪಕ್ಷ ಮೊದಲು ಎಂದುಕೊಂಡು ನಮ್ಮದೇ ನಾಡಿಗೆ , ನಮ್ಮದೇ ಭಾಷೆಗೆ ಎರಡು ಬಗೆಯುತ್ತಿರುವ , ನಾಳೇ ನಮ್ಮದೇ ಹೋರಾಟಗಾರರನ್ನು ಗೇಲಿ ಮಾಡುವ ನಮ್ಮದೇ ಜನರ ಸೋಗಲಾಡಿತನದ ಬಗ್ಗೆ ಹೇಸಿಗೆಯಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. 

ಕನ್ನಡ ನೆಲದಲ್ಲಿ ಈ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಎಂಬ ಸಂಘಟನೆಯ ಹೆಸರು , ಉದ್ದೇಶ , ಅಸ್ತಿತ್ವವೇ ಅನುಚಿತ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಈ ಕಹಿ ವಾತಾವರಣ ನಿರ್ಮಾಣವಾಗದೆ , ಶಾಂತಿ ಸೌಹಾರ್ದತೆಗೆ ಧಕ್ಕೆಯಾಗದಿರಲು ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.

ಕನ್ನಡತನಕ್ಕೆ ಧಕ್ಕೆಯಾದಾಗ ಬೀದಿಗಿಳಿದು ಎದೆಗೊಟ್ಟು ಹೋರಾಡುವ ಈ ಹೋರಾಟಗಾರರೇ ಕನ್ನಡ , ಕರ್ನಾಟಕದ ನಿಜವಾದ ಶಕ್ತಿ. ಇನ್ನುಳಿದವರೆಲ್ಲಾ ತೋರಿಕೆಗಷ್ಟೇ. ಜೈ ಕನ್ನಡ ,ಜೈ ಕನ್ನಡ ಪರ ಹೋರಾಟಗಾರರೇ ಎಂದು ನಿರ್ದೇಶಕ ಕವಿರಾಜ್ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News