‘ನೀಟ್’ ಸೀಟು ಹಂಚಿಕೆ ವಿಳಂಬ: ಸುಪ್ರೀಂಕೋರ್ಟ್ ಮೊರೆ ಹೋಗುವಂತೆ ರಾಜ್ಯ ಸರಕಾರಕ್ಕೆ ಕುಮಾರಸ್ವಾಮಿ ಒತ್ತಾಯ

Update: 2021-12-20 09:13 GMT

ಬೆಂಗಳೂರು, ಡಿ.20: ವೈದ್ಯ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿರುವ ಬಗ್ಗೆ ಕೇಂದ್ರ ಸರಕಾರದ ಮೇಲೆ ತೀವ್ರ ಟೀಕಾಪ್ರಹಾರ ನಡೆಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರಕಾರ ಕೂಡಲೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ವೈದ್ಯ ಶಿಕ್ಷಣವನ್ನು ಹಳ್ಳಿ ವಿದ್ಯಾರ್ಥಿಗಳಿಗೆ ‘ನೀಟಾಗಿ’ ತಪ್ಪಿಸುವ ಹುನ್ನಾರ ನಡೆಯುತ್ತಿದೆಯಾ? ಎನ್ನುವ ಅನುಮಾನ ಕಾಡುತ್ತಿದೆ. ಕೇಂದ್ರ ಸರಕಾರಕ್ಕೆ ‘ನೀಟ್’ ವ್ಯವಸ್ಥೆಯನ್ನು ಹಾಳು ಮಾಡುವ ಬಗ್ಗೆ ಇದ್ದ ಉತ್ಸಾಹ ಸರಿ ಮಾಡಲು ಇಲ್ಲ ಎನ್ನುವುದು ವಿದ್ಯಾರ್ಥಿಗಳಿಗೆ ಮನವರಿಕೆಯಾಗಿದೆ ಎಂದು ಹೇಳಿದ್ದಾರೆ.

‘ಸಮಾನ ಶಿಕ್ಷಣ, ಸಮಾನ ಅವಕಾಶ’ಗಳ ಸಂವಿಧಾನದ ಆಶಯವನ್ನು ಕೇಂದ್ರ ಸರಕಾರ ಗಾಳಿಗೆ ಬಿಟ್ಟಿದೆ. ನಾಲ್ಕು ತಿಂಗಳಿನಿಂದ ವೈದ್ಯ ಸೀಟುಗಳು ಹಂಚಿಕೆಯಾಗಿಲ್ಲ. ಪರಿಣಾಮ ಎಂಜಿನಿಯರಿಂಗ್ ಕೌನ್ಸೆಲಿಂಗ್ ಕೂಡ ತಡವಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಸಮರ್ಪಕ ನಿರ್ವಹಣೆ, ಅದಕ್ಷತೆಗೆ ಹಿಡಿದ ಕನ್ನಡಿ ಇದು ಎಂದು ಅವರು ಟೀಕಿಸಿದ್ದಾರೆ.

‘ಉನ್ನತ ಶಿಕ್ಷಣ ಉಳ್ಳವರಿಗೆ ಮಾತ್ರವೇ?’ ಇದೇ ಸತ್ಯ ಎನ್ನುವಂತೆ ಕೇಂದ್ರ ಸರಕಾರ ನಡೆದುಕೊಳ್ಳುತ್ತಿದೆ. ಗುಣಮಟ್ಟದ ಕೋಚಿಂಗ್ ಪಡೆಯಲು ಶಕ್ತಿ ಇಲ್ಲದ, ಆರ್ಥಿಕವಾಗಿ ದುರ್ಬಲರಾದ ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯ ಶಿಕ್ಷಣವನ್ನು ಶಾಶ್ವತವಾಗಿ ತಪ್ಪಿಸುವ ದುರಾಲೋಚನೆ ಈ ‘ವಿಳಂಬ ದ್ರೋಹ’ದ ಹಿಂದೆ ಇದೆಯಾ? ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸರಕಾರಗಳು ಅಸಹಾಯತೆಯ ‘ನಾಟಕ’ ವಾಡುತ್ತಾ ವಿದ್ಯಾರ್ಥಿ-ಪೆÇೀಷಕರನ್ನು ಯಾಮಾರಿಸುತ್ತಿವೆ. ನೀಟ್ ವಿಳಂಬದಿಂದ ವೈದ್ಯ, ಎಂಜಿನಿಯರಿಂಗ್ ಸೀಟುಗಳ ‘ಕಾಳಸಂತೆ ಬಿಕರಿ’ಗೆ ಸರಕಾರಗಳೇ ಅವಕಾಶ ಮಾಡಿಕೊಟ್ಟಂತೆ ಆಗಿದೆ. ಇದ್ಯಾವ ಸೀಮೆ ಶಿಕ್ಷಣ ನೀತಿ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ ಕೂಡಲೇ ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಿ ತ್ವರಿತ ತೀರ್ಪು ನೀಡುವಂತೆ ಮನವಿ ಮಾಡುವುದು ಸೇರಿ, ಕೇಂದ್ರದ ಮೇಲೆ ಒತ್ತಡ ಹೇರಬೇಕು. ಭಾರತವನ್ನು ‘ವಿಶ್ವಗುರು’ ಮಾಡುವ ಉಮೇದಿನಲ್ಲಿರುವ ಕೇಂದ್ರವು, ಗ್ರಾಮೀಣ ವಿದ್ಯಾರ್ಥಿಗಳ ಹಿತ ಕಾಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನೀಟ್ ಅವ್ಯವಸ್ಥೆ ಬಗ್ಗೆ ರಾಜ್ಯ ಸರಕಾರವು ನೆರೆ ರಾಜ್ಯಗಳಂತೆ ದನಿಯೆತ್ತಬೇಕು. ಹಾಗೆ ಮಾಡದಿದ್ದರೆ, ಖಾಸಗಿ ವೈದ್ಯ ಕಾಲೇಜುಗಳ ಜತೆ ಸರಕಾರ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಜನರು ಭಾವಿಸಬೇಕಾಗುತ್ತದೆ. ಉನ್ನತ ಶಿಕ್ಷಣ ಎಲ್ಲರ ಹಕ್ಕು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News