ಬೆಳಗಾವಿ ಘಟನೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ: ಸಿ.ಟಿ.ರವಿ ಆರೋಪ

Update: 2021-12-20 14:03 GMT

ಚಿಕ್ಕಮಗಳೂರು, ಡಿ.20: ಬೆಳಗಾವಿಯಲ್ಲಿ ಎಂಇಎಸ್ ನಡೆಸಿದ ದುಷ್ಕೃತ್ಯದ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಹತಾಶ ಮನಸ್ಥಿತಿಯಲ್ಲಿರುವ ಕಾಂಗ್ರೆಸ್ ದೇಶದಲ್ಲಿ ಸಂಘರ್ಷ ಹುಟ್ಟುಹಾಕಿ ರಾಜಕೀಯ ಲಾಭ ಪಡೆಯಲು ಷಡ್ಯಂತರ ನಡೆಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಪ್ರಕರಣದ ನಿರ್ಮಾಪಕರು ಮತ್ತು ನಿರ್ದೇಶಕರು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಟ್ಟಾಗ ಎಂಇಎಸ್ ಕಾರ್ಯಕರ್ತರ ಜೊತೆ ಕಾಂಗ್ರೆಸ್ ಕಾರ್ಯಕರ್ತರೂ ಇದ್ದರು. ಎಂಇಎಸ್ ಕಾರ್ಯಕರ್ತರು ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದರು, ಅಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಝಮೀರ್ ಅಹಮದ್ ಕಟ್ಟಾ ಬೆಂಬಲಿಗರು ಇದ್ದರು.

ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ ಮಾಡಿದ ಘಟನೆ ಹಿಂದೆ ಇರುವುದು ಎಂಇಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು, ಈಗ ಬಸವೇಶ್ವರರ ಪ್ರತಿಮೆಗೆ ಅಪಮಾನ ಮಾಡಿದ್ದಾರೆ. ಇದೆಲ್ಲದರ ಹಿಂದೆ ಕಾಂಗ್ರೆಸ್ ಮತ್ತು ಎಂಇಎಸ್ ಕಾರ್ಯಕರ್ತರು ಇದ್ದು, ಇದರ ಹಿಂದೆ ಜಾತಿ ಸಂಘರ್ಷ, ಭಾಷಾ ಸಂಘರ್ಷ ಹುಟ್ಟುಹಾಕಿ ರಾಜಕೀಯ ದುರ್ಲಾಭ ಪಡೆಯುವ ಸಂಚು ಮಾಡಲಾಗಿದೆ. ಇಂತಹ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಮತ್ತು ಗೃಹಸಚಿವರನ್ನು ಒತ್ತಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News