ಎಂಇಎಸ್ ಕಿಡಿಗೇಡಿಗಳ ವಿರುದ್ಧ ದೇಶದ್ರೋಹ ಪ್ರಕರಣ: ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕಾರ

Update: 2021-12-20 14:53 GMT

ಬೆಳಗಾವಿ, ಡಿ. 20: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಛತ್ರಪತಿ ಶಿವಾಜಿ ಪ್ರತಿಮೆಗೆ ಅವಮಾನ ಮಾಡಿದ ಎಂಇಎಸ್ ಕಿಡಿಗೇಡಿಗಳ ಮೇಲೆ ಗೂಂಡಾ ಕಾಯ್ದೆ ಹಾಗೂ ದೇಶದ್ರೋಹ ಪ್ರಕರಣ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟ ಪ್ರಕರಣ, ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಪುತ್ಥಳಿಗೆ ಅಪಮಾನ ಘಟನೆ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಒಕ್ಕೂರಲಿನಿಂದ ಘಟನೆಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಲಾಯಿತು.

ರಾಜ್ಯದ ಎರಡನೆ ಶಕ್ತಿಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಕಿತ್ತೂರು ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ ಮಾಡಲಾಗುವುದು. ಈಗಾಗಲೇ ರಾಯಣ್ಣನ ಪ್ರತಿಮೆಗೆ ಹಾನಿ ಮತ್ತು ಶಿವಾಜಿ ಪ್ರತಿಮೆ ಮಸಿ ಬಳಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಟ್ಟ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಯೊಂದಿಗೆ ಮಾತನಾಡಲಾಗುವುದು. ಕಾನೂನಿನಲ್ಲಿ ಅವಕಾಶವಿದ್ದರೆ ಎಂಇಎಸ್ ಸಂಘಟನೆಯನ್ನು ನಿಷೇಧಿಸಲಾಗುವುದು. ಆ ನಿಟ್ಟಿನಲ್ಲಿ ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಬೊಮ್ಮಾಯಿ ತಿಳಿಸಿದರು.

ಮಹಾರಾಷ್ಟ್ರದ ಜಥ್ ತಾಲೂಕಿನಲ್ಲಿರುವ 40 ಗ್ರಾ.ಪಂ.ನಲ್ಲಿರುವ ಕನ್ನಡಿಗರು ಕರ್ನಾಟಕ ರಾಜ್ಯಕ್ಕೆ ಸೇರ್ಪಡೆಗೆ ನಿರ್ಣಯ ಮಾಡಿದ್ದು, ಅವರ ರಕ್ಷಣೆಗೆ ಸರಕಾರ ಬದ್ಧ. ಜನ ಮನ್ನಣೆ ಕಳೆದುಕೊಂಡಿರುವ ಎಂಇಎಸ್ ಪುಂಡರು ಬೆಳಗಾವಿಯನ್ನು ಕ್ಷೋಭೆ ಸೃಷ್ಟಿಸುವ ಯತ್ನಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಸರಕಾರ ಕಠಿಣ ನಿಲುವು ಕೈಗೊಳ್ಳಲಿದೆ. ಈ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಗಡಿ ವಿಚಾರದಲ್ಲಿ ಒಂದು ಇಂಚು ಬಿಟ್ಟುಕೊಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದ ಕೆಲವು ಕಡೆಗಳಲ್ಲಿ ಒಂದು ವರ್ಗ ಅಂಬೇಡ್ಕರ್ ಮತೊಂದು ವರ್ಗ ಬಸವಣ್ಣನ ಮೂರ್ತಿ ಭಗ್ನ ಮಾಡುವ ಮೂಲಕ ಶಾಂತಿಭಂಗವನ್ನು ಉಂಟು ಮಾಡುವ ಯತ್ನ ನಡೆಸಿವೆ. ಅದೇ ರೀತಿಯಲ್ಲಿ ರಾಯಣ್ಣನ ಮೂರ್ತಿಯನ್ನು ಭಗ್ನ ಮಾಡಲಾಗಿದೆ. ಇದರ ಹಿಂದೆ ಕ್ರಿಮಿನಲ್ ಮನಸ್ಥಿತಿಯುಳ್ಳ ವ್ಯಕ್ತಿಗಳಿದ್ದು, ರಾಜ್ಯದಲ್ಲಿ ಅಶಾಂತಿ ಮೂಡಿಸಬೇಕೆಂಬ ಉದ್ದೇಶದಿಂದಲೇ ಷಡ್ಯಂತರ ಮಾಡಿದ ಪೂರ್ವ ನಿಯೋಜಿತ ಕೃತ್ಯ ಇದಾಗಿದೆ ಎಂದು ಅವರು ತಿಳಿಸಿದರು. 

ಕನ್ನಡಿಗರ ಮತು ಮರಾಠಿ ಭಾಷಿಕರು ಶಾಂತಿ, ಸೌಹಾರ್ದದಿಂದ ಇದ್ದಾರೆ. ಆದರೆ, ಗಡಿ, ಭಾಷೆ ವಿಚಾರ ಮುಂದಿಟ್ಟುಕೊಂಡು ಅಶಾಂತಿ, ಅಸ್ಥಿರತೆ ಸೃಷ್ಟಿ ಸಹಿಸಲು ಸಾಧ್ಯವಿಲ್ಲ. ರಾಯಣ್ಣ ಮತ್ತು ಶಿವಾಜಿ ಪುತ್ಥಳಿಗೆ ಅವಮಾನ ಕೃತ್ಯದ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಸದನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News