ಕಾಡ್ಗಿಚ್ಚು ನಂದಿಸುವಿಕೆಗೆ ಹೆಲಿಕಾಪ್ಟರ್ ಖರೀದಿ: ಅರಣ್ಯ ಸಚಿವ ಉಮೇಶ್ ಕತ್ತಿ

Update: 2021-12-20 15:37 GMT

ಬೆಳಗಾವಿ ಸುವರ್ಣವಿಧಾನಸೌಧ, ಡಿ.20: ಅರಣ್ಯ ದುರ್ಗಮ ಬೆಟ್ಟ ಪ್ರದೇಶದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಾಗ ಶೀಘ್ರವಾಗಿ ನಂದಿಸಲು ಹೆಲಿಕಾಪ್ಟರ್ ಗಳು ಸದ್ಯ ನಮ್ಮಲ್ಲಿಲ್ಲ. ಹೀಗಾಗಿ, ಅವುಗಳನ್ನು ಇಲಾಖೆ ವತಿಯಿಂದ ಖರೀದಿ ಮಾಡುವುದಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದರು.

ಸೋಮವಾರ ವಿಧಾನ ಪರಿಷತ್ತಿನಲ್ಲಿ ಸದಸ್ಯೆ ತೇಜಸ್ವಿನಿಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅರಣ್ಯ ಇಲಾಖೆಯು ಬೆಂಕಿಯ ಸಂದರ್ಭದಲ್ಲಿ ಬೆಂಕಿಯ ಮುಂಗಡ ಮೇಲ್ವಿಚಾರಣೆಗಾಗಿ ಭಾರತೀಯ ಅರಣ್ಯ ಸಮೀಕ್ಷೆ ಮತ್ತು ರಾಷ್ಟ್ರೀಯ ದೂರ ಸಂವೇದಿ ಏಜೆನ್ಸಿ ಸಹಯೋಗದೊಂದಿಗೆ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಸಹಯೋಗದಲ್ಲಿ ಅರಣ್ಯ ಬೆಂಕಿ, ಉಸ್ತುವಾರಿ ಮತ್ತು ವಿಶ್ಲೇಷಣಾ ಕೋಶ ಸ್ಥಾಪಿಸಲಾಗಿದೆ ಎಂದರು.

ಈ ಕೋಶದ ವತಿಯಿಂದ ಕಾಡ್ಗಿಚ್ಚನ್ನು ಪತ್ತೆಹಚ್ಚಲು ಉಪಗ್ರಹ ಚಿತ್ರಗಳು ಮತ್ತು ಮಾಹಿತಿ ತಂತ್ರಜ್ಞಾನ ಬಳಸಲಾಗುತ್ತಿದೆ. ಈ ತಂತ್ರಜ್ಞಾನವು ಕಾಡಿನ ಬೆಂಕಿಯನ್ನು ಪರಿಣಾಮಕಾರಿಯಾಗಿ ಮತ್ತು ಸಮಯೋಚಿತವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ತುರ್ತು ಪರಿಸ್ಥಿತಿಗೆ ಹಾಜರಾಗಲು ಆಯಕಟ್ಟಿನ ಸ್ಥಳಗಳಲ್ಲಿ ತಾತ್ಕಾಲಿಕ ಅಗ್ನಿಶಾಮಕ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಅರಣ್ಯ ಇಲಾಖೆಯು ಅಗ್ನಿಶಾಮಕ ಮತ್ಯು ತುರ್ತುಸೇವೆಗಳ ಇಲಾಖೆಯೊಂದಿಗೆ ಸಹಕರಿಸುತ್ತಿದೆ ಮತ್ತು ಇದಕ್ಕಾಗಿ 50ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಬೆಂಕಿ ಅವಘಡಗಳು ಸಂಭವಿಸಿದ ಸ್ಥಳಗಳನ್ನು ಪತ್ತೆಹಚ್ಚಲು ಸೂಕ್ಷ್ಮಪ್ರದೇಶಗಳನ್ನು ವಾಚ್ ಟಾವರ್‍ಗಳನ್ನು ನಿರ್ಮಿಸಲಾಗಿದೆ. ವೈರ್ ಲೆಸ್ ಸೆಂಟರ್‍ಗಳಂತ ಪರಿಣಾಮಕಾರಿ ಸಂವಹ ಸಾಧನಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದ ಅವರು, ದೊಡ್ಡಬೆಂಕಿಯ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‍ಗಳ ಸೇವೆಯನ್ನು ಪಡೆದು ಬೆಂಕಿ ನಂದಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News