ಬೆಳಗಾವಿಯಲ್ಲಿ ಎಂಇಎಸ್ ವಿರುದ್ಧ ಕನ್ನಡಿಗರ ರಣಕಹಳೆ

Update: 2021-12-20 15:51 GMT

ಬೆಳಗಾವಿ, ಡಿ.20: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವ ಹಾಗೂ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಭಗ್ನಗೊಳಿಸಿರುವ ಪುಂಡಾರ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಿಷೇಧಿಸುವಂತೆ ಕನ್ನಡಪರ ಹೋರಾಟಗಾರರು ರಣಕಹಳೆ ಮೊಳಗಿಸಿದರು. 

ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಒಳಗೊಂಡಂತೆ ವಿವಿಧ ಸಂಘಟನೆಗಳ ಸದಸ್ಯರು ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ನಗರಕ್ಕೆ ಆಗಮಿಸಿ ಬೃಹತ್ ಮೆರವಣಿಗೆ ನಡೆಸಿ ರಸ್ತೆ ತಡೆದು ಎಂಇಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರಮುಖವಾಗಿ ಬೆಳಗಾವಿಯ ಬಸ್ ನಿಲ್ದಾಣ ಪೀರಣವಾಡಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರೆ, ಇನ್ನೂ ಕೆಲ ಕಾರ್ಯಕರ್ತರು ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೋರಾಟ ನಡೆಸಿದರು. 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ, ಬೆಳಗಾವಿಯಲ್ಲಿ ಚಳಿಗಾಲದ ಜಂಟಿ ಅಧಿವೇಶನ ವೇಳೆಯೇ ಶಿವಸೇನೆ ಮತ್ತು ಎಂಇಎಸ್ ಪುಂಡರು ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಠಿಣ ಕ್ರಮಕ್ಕೆ ಆಗ್ರಹ: ಹೋರಾಟಗಾರ ಪ್ರವೀಣ್ ಶೆಟ್ಟಿ ಮಾತನಾಡಿ, ನಾಡದ್ರೋಹಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಎಂಇಎಸ್ ಮುಖಂಡರಿಗೆ ಮಸಿ ಬಳಿದ ಕನ್ನಡಿಗರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. 

ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಶಾಸಕರು ಮಾತನಾಡಬೇಕು. ಇಲ್ಲದಿದ್ದರೆ ಅಂತಹ ಶಾಸಕರ ವಿರುದ್ಧ ಕನ್ನಡಪರ ಸಂಘಟನೆಗಳು ಧ್ವನಿ ಎತ್ತಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹೋರಾಟಗಾರರು ವಶಕ್ಕೆ

ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬರುತ್ತಿದ್ದ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹಾಗೂ ಕಾರ್ಯಕರ್ತರನ್ನು ಪೆÇಲೀಸರು ತಾಲೂಕಿನ ಹಿರೇಬಾಗೇವಾಡಿ ಟೋಲ್ ಬಳಿ ಸೋಮವಾರ ವಶಕ್ಕೆ ಪಡೆದರು. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಅವರನ್ನೂ ಪೊಲೀಸರು ವಶಕ್ಕೆ ಪಡೆದು ಬಸ್ಸಿನಲ್ಲಿ ಕರೆದೊಯ್ದರು.

ಬಿಗಿ ಭದ್ರತೆ

ಕನ್ನಡಪರ ಹೋರಾಟಗಾರರ ಹಿನ್ನೆಲೆ ಹಿರೇಬಾಗೇವಾಡಿ ಬಳಿ ಹಾಗೂ ಬೆಳಗಾವಿ, ಸುವರ್ಣಸೌಧದ ಸುತ್ತಮುತ್ತ ಭಾರೀ ಪೆÇಲೀಸ್ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು.

ಮತ್ತೆ ಕನ್ನಡ ಬಾವುಟಕ್ಕೆ ಬೆಂಕಿ, ಬಸವೇಶ್ವರ ಭಾವಚಿತ್ರಕ್ಕೆ ಮಸಿ

ಮತ್ತೆ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟಿರುವುದಲ್ಲದೆ ಬಸವೇಶ್ವರರ ಭಾವಚಿತ್ರಕ್ಕೆ ಮಸಿ ಬಳಿದು ದುಷ್ಕøತ್ಯ ಮೆರೆದಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಖಾನಾಪುರ ತಾಲೂಕಿನ ಹಲಸಿ ಗ್ರಾಪಂ ಆವರಣದಲ್ಲಿನ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿದ್ದಾರೆ. ಅಲ್ಲದೆ, ಪಕ್ಕದಲ್ಲೇ ಬಸವೇಶ್ವರ ವೃತ್ತದಲ್ಲಿ ಹಾಕಲಾಗಿದ್ದ ಬಸವೇಶ್ವರ ಭಾವಚಿತ್ರಕ್ಕೆ ಮಸಿ ಬಳಿದಿದ್ದಾರೆ. ಘಟನೆ ಸಂಬಂಧ ನಂದಗಢ ಠಾಣಾ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News