ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ನಿಧನಕ್ಕೆ ಉಭಯ ಸದನಗಳಲ್ಲಿ ಸಂತಾಪ

Update: 2021-12-20 16:15 GMT

ಬೆಳಗಾವಿ, ಡಿ. 20:  ಕೇಂದ್ರದ ಮಾಜಿ ಸಚಿವ, ರಾಜಕೀಯ ಹಿರಿಯ ಮುತ್ಸದ್ದಿ ರಾಜಾನುಕುಂಟೆ ಲಕ್ಷ್ಮಿನಾರಾಯಣಪ್ಪ ಜಾಲಪ್ಪ (ಆರ್.ಎಲ್.ಜಾಲಪ್ಪ) ಅವರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸೋಮವಾರ ವಿಧಾನಸಭೆ ಬೆಳಗ್ಗೆ 11ಗಂಟೆಯ ಸುಮಾರಿಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿ, ಆರ್.ಎಲ್.ಜಾಲಪ್ಪ ಅವರು ಡಿ.17ರಂದು ನಿಧನ ಹೊಂದಿರುತ್ತಾರೆ ಎಂದು ಸದನಕ್ಕೆ ವಿಷಾದದಿಂದ ತಿಳಿಸಿದರು.

ಸಹಕಾರ ಇಲಾಖೆಗೆ ಹೊಸರೂಪ: ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿಂದುಳಿದ ವರ್ಗಗಳ ಗಟ್ಟಿ ಧ್ವನಿಯಾಗಿ ಕೆಲಸ ಮಾಡಿದ್ದ ಜಾಲಪ್ಪನವರು ಅಪರೂಪದ ರಾಜಕಾರಣಿ, ವಿಭಿನ್ನ ವ್ಯಕ್ತಿತ್ವದ, ನೇರ ನಡೆ-ನುಡಿಗೆ ಹೆಸರಾಗಿದ್ದ ಅವರು ಸಹಕಾರ ಕ್ಷೇತ್ರದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ ಎಂದು ಸ್ಮರಿಸಿದರು.

ಸಹಕಾರ ಚಳವಳಿಗೆ ಹೊಸ ದಿಕ್ಕು ಮತ್ತು ಸಹಕಾರ ಇಲಾಖೆಗೆ ಹೊಸ ರೂಪ ನೀಡುವಲ್ಲಿ ಜಾಲಪ್ಪರ ಪಾತ್ರ ಮಹತ್ವದ್ದು. ಸ್ವಾಭಿಮಾನಕ್ಕೆ ಹೆಸರಾಗಿದ್ದ ಶ್ರೀಯುತರು ಹಿಂದುಳಿದ ವರ್ಗಗಳ ಏಳ್ಗೆಗೆ ವಿಶೇಷ ಕಳಕಳಿ ಹೊಂದಿದ್ದರು. ಜೊತೆಗೆ ಆ ಸಮುದಾಯದ ಮಾರ್ಗದರ್ಶಕರೂ ಆಗಿದ್ದರು ಎಂದು ಬೊಮ್ಮಾಯಿ ಗುಣಗಾನ ಮಾಡಿದರು.

ನನ್ನ ದೊಡ್ಡ ಹಿತೈಷಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಜಾಲಪ್ಪ ಅವರ ಜೀವನ ಒಂದು ರೀತಿಯಲ್ಲಿ ತೆರೆದ ಪುಸ್ತಕ. ಅವರ ರಾಜಕೀಯ ಜೀವನದಲ್ಲಿ ಅವರ ಕುಟುಂಬ ಎಂದೂ ಮೂಗುತೂರಿಸಲಿಲ್ಲ. ಅವರು ವಯಸ್ಸಿನಲ್ಲಿ ನನಗಿಂತ ಹಿರಿಯರಾದರೂ ನನ್ನ ಅತ್ಯಂತ ದೊಡ್ಡ ಹಿತೈಷಿ ಎಂದು ನೆನಪು ಮಾಡಿಕೊಂಡರು.

ಸಿದ್ದರಾಮಯ್ಯ ನೀನು ಮುಖ್ಯಮಂತ್ರಿ ಆಗಬೇಕೆಂದು ಬಲವಾಗಿ ಪ್ರತಿಪಾದಿಸುತ್ತಿದ್ದರು. ನನ್ನ ಚುನಾವಣೆಗಳಿಗೆ ಅವರು ಆರ್ಥಿಕ ನೆರವು ನೀಡುತ್ತಿದ್ದರು. ನೇರ ನುಡಿ ಮತ್ತು ನಿಷ್ಠುರತೆಗೆ ಹೆಸರಾಗಿದ್ದರು. ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಮುಖ್ಯ ಕಾರಣವೇ ಅಹ್ಮದ್ ಪಟೇಲ್ ಮತ್ತು ಆರ್.ಎಲ್.ಜಾಲಪ್ಪ. ನನ್ನ ಮಾರ್ಗದರ್ಶಕರು ಆಗಿದ್ದರು. ಅವರ ನಿಧನದಿಂದ ರಾಜ್ಯ ರಾಜಕಾರಣಕ್ಕೆ ಬಹಳ ದೊಡ್ಡ ನಷ್ಟ ಎಂದು ಅವರು ತಿಳಿಸಿದರು.

ಸ್ವತಃ ರೌಂಡ್ಸ್: ಜಾಲಪ್ಪ ಅವರು ಗೃಹ ಸಚಿವರಾಗಿದ್ದ ಅವಧಿಯಲ್ಲಿ ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆ ಹದಗೆಟ್ಟ ಸಂದರ್ಭದಲ್ಲಿ ಖುದ್ದು ತಾವೇ ಮಧ್ಯರಾತ್ರಿ ವೇಳೆಯಲ್ಲಿ ಕಾರು ತೆಗೆದುಕೊಂಡು ಪೊಲೀಸ್ ಸಿಬ್ಬಂದಿ ಎಚ್ಚರಿಸುವ ಕೆಲಸ ಮಾಡುತ್ತಿದ್ದರು. ಆಡಳಿತದಲ್ಲಿ ಮಾದರಿ ವ್ಯಕ್ತಿಯಾಗಿದ್ದರು. ಅರಸು ನಂತರದ ಅವಧಿಯಲ್ಲಿ ಹಿಂದುಳಿದ ವರ್ಗಕ್ಕೆ ದೊಡ್ಡ ಶಕ್ತಿಯಾಗಿದ್ದರು ಎಂದು ಕಾನೂನು ಸಚಿವ ಮಾಧುಸ್ವಾಮಿ ಸ್ಮರಣೆ ಮಾಡಿದರು.

ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಹಿರಿಯ ಸದಸ್ಯರಾದ ಶಿವಲಿಂಗೇಗೌಡ, ಜಿ.ಟಿ.ದೇವೇಗೌಡ, ಕಾಂಗ್ರೆಸಿನ ವೆಂಕಟರಮಣಯ್ಯ, ಬಿಜೆಪಿಯ ಕುಮಾರ ಬಂಗಾರಪ್ಪ ಸೇರಿ ಇನ್ನಿತರರು ಮಾತನಾಡಿದರು. ಆ ಬಳಿಕ ಮೃತರ ಗೌರವಾರ್ಥ ಎಲ್ಲರೂ ಎದ್ದು ನಿಂತು ಒಂದು ನಿಮಿಷ ಉಭಯ ಸದನಗಳಲ್ಲಿ ಮೌನಾಚರಣೆ ಮಾಡಿದರು. ಸದನದಲ್ಲಿ ಪ್ರಸ್ತಾಪಿಸಿದ ಸಂತಾಪ ಸೂಚನೆ ನಿರ್ಣಯವನ್ನು ಮೃತರ ಕುಟುಂಬ ವರ್ಗದವರಿಗೆ ಕಳುಹಿಸಲಾಗುವುದು ಎಂದು ಸ್ಪೀಕರ್ ಕಾಗೇರಿ ತಿಳಿಸಿದರು.

‘ಸದಾ ಜಾಲಿ ಮೂಡ್‍ನಲ್ಲೇ ಇರುತ್ತಿದ್ದ ಜಾಲಪ್ಪ ‘ಏಯ್ ಒಂದು ಪೆಗ್ ಹಾಕು’ ಎಂದು ಕರೆಯುತ್ತಿದ್ದರು. ತಮ್ಮ ಮನೆಗೆ ಯಾರೇ ಬಂದರೂ ವಿಶೇಷ ಆತಿಥ್ಯ ನೀಡುತ್ತಿದ್ದರು. ಎಪಿಎಂಸಿಗಳಲ್ಲಿ ರೈತರಿಂದ ದಲ್ಲಾಳಿಗಳ ಅಕ್ರಮ ವಸೂಲಿಗೆ ಕಡಿವಾಣ ಹಾಕಿದ್ದು, ಸಹಕಾರಿ ಇಲಾಖೆ ಸುಧಾರಣೆ ಮಾಡಿದ್ದು ಜಾಲಪ್ಪನವರು’

-ಜಿ.ಟಿ.ದೇವೇಗೌಡ ಜೆಡಿಎಸ್ ಹಿರಿಯ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News