ಚಿಕ್ಕಮಗಳೂರು: ಕಾಲೇಜು ಯುವತಿ ಆತ್ಮಹತ್ಯೆ
Update: 2021-12-20 21:52 IST
ಚಿಕ್ಕಮಗಳೂರು, ಡಿ.20: ಕಾಲೇಜು ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪ ತಾಲೂಕಿನ ಕುದುರೆಗುಂಡಿ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ.
ಕೊಪ್ಪ ಪಟ್ಟಣದ ಸರಕಾರಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಕಾಲೇಜು ಯುವತಿ ಸುಮಾ(20) ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾಳೆ.
ಸೋಮವಾರ ಕುದುರೆಗುಂಡಿ ಗ್ರಾಮದ ತನ್ನ ಮನೆಯಲ್ಲಿ ಸುಮಾ ತನ್ನ ಅಕ್ಕನ 6 ತಿಂಗಳ ಮಗಳ ಮುಂದೆ ಬಿಸಿ ನೀರು ಕಾಯಿಸಿ ಇಟ್ಟಿದ್ದು, ಬಿಸಿ ನೀರು ತಾಗಿ ಮಗುವಿನ ಮೈಮೇಲೆ ಬೊಬ್ಬೆಗಳು ಉಂಟಾಗಿದ್ದವು.
ಈ ವೇಳೆ ಸುಮಾ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಗುವಿನ ಪ್ರಾಣಕ್ಕೆ ತೊಂದರೆಯಾಗಿದೆಯೇನೋ ಎಂದು ಭಾವಿಸಿ ಭೀತಿಗೊಳಗಾದ ಸುಮಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ವೇಲ್‍ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಹೇಳಲಾಗಿದೆ.
ಘಟನೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.