ಕಾಡುಗೊಲ್ಲ ನಿಗಮದ ಹೆಸರು ಬದಲಾಯಿಸಬೇಡಿ: ಮನವಿ ಪರಿಗಣಿಸುವಂತೆ ಹೈಕೋರ್ಟ್ ಆದೇಶ
Update: 2021-12-20 22:10 IST
ಬೆಂಗಳೂರು, ಡಿ.20: ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಹೆಸರು ಬದಲಾವಣೆ ಮಾಡದಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ಮನವಿಯನ್ನು ಮೂರು ತಿಂಗಳಲ್ಲಿ ಪರಿಗಣಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಉಪಾಧ್ಯಕ್ಷ ಸಿ.ಮಹಾಲಿಂಗಪ್ಪ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ವಾಸ್ತವವಾಗಿ ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯಗಳು ಒಂದೇ ಅಲ್ಲ. ಎರಡೂ ಬೇರೆ ಬೇರೆ ಸಮುದಾಯಗಳು. ಒಂದೊಮ್ಮೆ ಗೊಲ್ಲ-ಕಾಡುಗೊಲ್ಲರ ಅಭಿವೃದ್ಧಿ ನಿಗಮ ಎಂಬುದಾಗಿ ಸರಕಾರ ಹೆಸರು ಬದಲಿಸಿದರೆ ಕಾಡುಗೊಲ್ಲರಿಗೆ ಇರುವ ಸರಕಾರಿ ಸೌಲಭ್ಯಗಳು ಗೊಲ್ಲ ಸಮುದಾಯದವರೊಂದಿಗೆ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ.
ಹೀಗಾಗಿ, ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಹೆಸರು ಬದಲಾವಣೆ ಮಾಡದಂತೆ ಕೋರಿ ಸಂಘ 2021ರ ನ.30ರಂದು ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.