×
Ad

ಶಿವಾಜಿ ಜನ್ಮ ತಾಳದೆ ಇದ್ದಿದ್ದರೆ ಹಿಂದೂ ಧರ್ಮ ಉಳಿಯುತ್ತಿರಲಿಲ್ಲ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Update: 2021-12-20 22:32 IST

ಬೆಳಗಾವಿ, ಡಿ.20: ಶಿವಾಜಿ, ರಾಯಣ್ಣ ಪ್ರತಿಮೆಗಳಿಗೆ ಅವಮಾನ ಹಾಗೂ ಕನ್ನಡ ಧ್ವಜ ಸುಟ್ಟ ಪ್ರಕರಣದ ಹಿಂದೆ ಸರಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರ ಅಡಗಿದಂತೆ ಭಾಸವಾಗುತ್ತದೆ. ಸಿಎಎ ಜಾರಿಗೆ ತರಲು ಮುಂದಾದಾಗ ಇದೇ ರೀತಿ ಪ್ರತಿಭಟನೆಗಳು ನಡೆದು ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿತ್ತು ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಲ್ ಹೇಳಿದರು.

ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿದ್ದು, ಇಲ್ಲಿನ ಅನ್ನ ತಿಂದು, ಸರಕಾರದ ಸಕಲ ಸೌಲಭ್ಯಗಳನ್ನು ಪಡೆಯುವವರು, ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುತ್ತಾರೆ, ಕ್ರಿಕೆಟ್‍ನಲ್ಲಿ ಪಾಕಿಸ್ತಾನ ಗೆದ್ದರೆ ಸಂಭ್ರಮಿಸುತ್ತಾರೆ, ನಮ್ಮ ದೇಶದ ಸೇನಾಧಿಕಾರಿಗಳು ಹುತಾತ್ಮರಾದರೆ ಅವರ ಸಾವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಾರೆ ಎಂದರು.

ಹಿಂದಿ ಭಾಷೆಯನ್ನು ವಿರೋಧಿಸುತ್ತಾರೆ. ಆದರೆ, ಒಂದು ವೇಳೆ ನಮ್ಮ ದೇಶದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಜನ್ಮ ತಾಳದೆ ಇದ್ದಿದ್ದರೆ ಹಿಂದೂ ಧರ್ಮ ಉಳಿಯುತ್ತಿರಲಿಲ್ಲ. ಇಲ್ಲಿನ ಫಲಕಗಳನ್ನು ಉರ್ದು ಭಾಷೆಯಲ್ಲಿ ಅಳವಡಿಸಬೇಕಾಗಿತ್ತು ಎಂದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕ ರಿಝ್ವಾನ್ ಅರ್ಶದ್, ಇಲ್ಲಿ ಕನ್ನಡ ನಾಡು, ನುಡಿ, ಧ್ವಜ, ರಾಷ್ಟ್ರ ನಾಯಕರ ವಿಚಾರ ಚರ್ಚೆಯಾಗುತ್ತಿದೆ. ಇದರಲ್ಲಿ ಉರ್ದು ಭಾಷೆಯನ್ನು ಯಾಕೆ ಎಳೆದು ತರುತ್ತಿದ್ದೀರಾ ಎಂದು ಕಿಡಿಗಾರಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರಾದ ಬೈರತಿ ಸುರೇಶ್, ಡಾ.ರಂಗನಾಥ್, ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ಸದಸ್ಯರು ಸಾಥ್ ನೀಡಿದರು.

ಅಲ್ಲದೆ, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಬಿಜೆಪಿ ಸದಸ್ಯ ಯತ್ನಾಳ್ ನೀಡಿರುವ ಹೇಳಿಕೆಗಳನ್ನು ಕಡತದಿಂದ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು. ಈ ವೇಳೆ ಬಿಜೆಪಿ ಸದಸ್ಯರು ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News