ಮುಸ್ಲಿಮ್ ಸಮುದಾಯವನ್ನು ಗುರಿ ಮಾಡುವುದು ಸರಿಯಲ್ಲ: ಶಾಸಕ ಯತ್ನಾಳ್ ಹೇಳಿಕೆಗೆ ರಿಝ್ವಾನ್ ಅರ್ಶದ್ ಆಕ್ಷೇಪ
ಬೆಳಗಾವಿ, ಡಿ. 20: ಎಲ್ಲರನ್ನು ಒಗ್ಗೂಡಿಸುವ ಬದಲಿಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉದ್ದೇಶಪೂರ್ವಕವಾಗಿ ಮುಸ್ಲಿಮ್ ಸಮುದಾಯ ಮತ್ತು ಉರ್ದುಭಾಷೆ ಗುರಿ(ಟಾರ್ಗೆಟ್) ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯ ರಿಝ್ವಾನ್ ಅರ್ಶದ್ ಆಕ್ಷೇಪಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ನಡೆದ ಕನ್ನಡ ಬಾವುಟ ಸುಟ್ಟ ಪ್ರಕರಣ ಹಾಗೂ ರಾಯಣ್ಣ, ಶಿವಾಜಿ ಪುತ್ಥಳಿ ಅವಮಾನ ಘಟನೆ ಖಂಡಿಸಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದಿ ಭಾಷೆಯನ್ನು ಯಾರೂ ವಿರೋಧ ಮಾಡಿಲ್ಲ. ಆದರೆ, ಹಿಂದಿ ಏರಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಯಣ್ಣ ಮತ್ತು ಶಿವಾಜಿ ಪುತ್ಥಳಿ ಅವಮಾನ ಘಟನೆಗಳು ಖಂಡನೀಯ. ವಿಧಾನಸಭೆ ಕಿಡಿಗೇಡಿಗಳಿಗೆ ಮತ್ತು ಕನ್ನಡಿಗರಿಗೆ ಸ್ಪಷ್ಟ ಸಂದೇಶ ರವಾನಿಸಬೇಕು. ಆ ನಿಟ್ಟಿನಲ್ಲಿ ಸ್ವಾರ್ಥಕ್ಕಾಗಿ ಶಾಂತಿ ಕದಡುವ ಪುಂಡರ ವಿರುದ್ಧ ಕಠಿಣ ಕ್ರಮ ಜರುಗಿಸುವ ಮೂಲಕ ಎಚ್ಚರಿಕೆ ನೀಡಬೇಕು ಎಂದು ರಿಝ್ವಾನ್ ಅರ್ಶದ್ ಸಲಹೆ ನೀಡಿದರು.