ಅಂಗನವಾಡಿಗಳಲ್ಲಿ ಭಾರೀ ಅವ್ಯವಹಾರ: ಕ್ರಮ ಕೈಗೊಳ್ಳದ ಸರಕಾರ; ಆರೋಪ
ಬೆಂಗಳೂರು, ಡಿ.20: ಸರಕಾರ ಯೋಜನೆಗಳನ್ನು ಹಳ್ಳಿಯಲ್ಲಿರುವ ಬಡವರಿಗೆ ತಲುಪಿಸುವ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರ ಸ್ಥಾನಕ್ಕೆ ಪ್ರಭಾವಿಗಳು ನೇಮಕವಾಗಿದ್ದಾರೆ. ಆದುದರಿಂದ ಬಡವರಿಗೆ ಸೇರಬೇಕಾದ ಸವಲತ್ತುಗಳು ಪ್ರಭಾವಿಗಳ ಪಾಲಾಗಿರುವ ಕುರಿತು ಸಾರ್ವಜನಿಕವಾಗಿ ಬಹಿರಂಗವಾದರೂ, ಸರಕಾರವು ಒತ್ತಡಕ್ಕೆ ಮಣಿದು ಭ್ರಷ್ಟರ ವಿರುದ್ಧ ಕ್ರಮ ವಹಿಸದೇ ಮೌನವಾಗಿದೆ ಎಂದು ವಕೀಲ ಡಿ.ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಅಂಗನವಾಡಿಗಳಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದ್ದು, ಅಂಗನವಾಡಿಯ ಸೌಲಭ್ಯಗಳು ಪ್ರಭಾವಿಗಳ ಪಾಲಾಗುತ್ತಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಬಹುತೇಕ ಜನರು ಅವಿದ್ಯಾವಂತರು ಹಾಗೂ ಬಡವರಾಗಿದ್ದಾರೆ. ಹಾಗಾಗಿ ಆ ಭಾಗದ ಜನರಿಗೆ ಅಂಗನವಾಡಿಗಳು ಸರಿಯಾಗಿ ಕೆಲಸ ಮಾಡಬೇಕು. ಆದರೆ ಅಂಗನವಾಡಿಗಳು ಭ್ರಷ್ಟಾಚಾರದಲ್ಲಿ ತೊಡಗಿವೆ. ಇದನ್ನು ದಾಖಲೆಗಳ ಸಮೇತ ಸರಕಾರಕ್ಕೆ ತೋರಿಸಿದರೂ ಸರಕಾರವು ಗಮನ ವಹಿಸುತ್ತಿಲ್ಲ ಎಂದರು.
ಐಎಎಸ್-ಐಪಿಎಸ್ ಅಧಿಕಾರಿಗಳಿಗೆ ನೋಟಿಸ್
ಬಳ್ಳಾರಿಯ ಹೊನ್ನಾಳಿ ತಾಂಡ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಅನ್ನಪೂರ್ಣಮ್ಮನ ಭ್ರಷ್ಟಾಚಾರವು ಬಹಿರಂಗವಾದ ಬೆನ್ನಲ್ಲೆ ಸರಕಾರವು ಅವರನ್ನು ಅಮಾನತ್ತುಗೊಳಿಸಿತ್ತು. 20 ತಿಂಗಳ ಬಳಿಕ ಪುನಃ ನೇಮಕ ಮಾಡಿಕೊಂಡಿದೆ. ಇದು ನಿಯಮಬಾಹಿರವೆಂದು ಧಾರವಾಡದ ಉಚ್ಚ ನ್ಯಾಯಾಲಯದಲ್ಲಿ ದೂರು ನೀಡಲಾಯಿತು. ಉಚ್ಚ ನ್ಯಾಯಲಯದ ಆದೇಶದಂತೆ ಐವರು ಐಎಎಸ್ ಮತ್ತು ಒಬ್ಬರು ಐಪಿಎಸ್ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.
-ಡಿ.ಮಲ್ಲಿಕಾರ್ಜುನ, ವಕೀಲ