ಕೊಳ್ಳೇಗಾಲ: ಮನೆಯಲ್ಲಿ ಭಾರೀ ಸ್ಫೋಟ; ಹಲವು ಮನೆಗಳಿಗೆ ಹಾನಿ
ಚಾಮರಾಜನಗರ, ಡಿ.21: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸಿಂಗಲ್ಲನೂರು ಗ್ರಾಮದ ಮನೆಯೊಂದರಲ್ಲಿ ಇಂದು ಮುಂಜಾನೆ ಭಾರೀ ಸ್ಫೋಟ ಸಂಭವಿಸಿದ್ದು, ಮನೆ ಸಂಪೂರ್ಣ ಧ್ವಂಸಗೊಂಡಿದೆ. ಇದಲ್ಲದೆ ಸುತ್ತಮುತ್ತಲಿನ ಹಲವು ಮನೆಗಳಿಗೂ ಹಾನಿ ಸಂಭವಿಸಿದೆ.
ಸಿಂಗನಲ್ಲೂರು ಗ್ರಾಮದ ಪರಿಶಿಷ್ಟ ಜಾತಿಯ ಬಡಾವಣೆಯ ಸಿದ್ದರಾಜು ಎಂಬವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಈ ವೇಳೆ ಮನೆಯಲ್ಲಿದ್ದ ರತ್ಮಮ್ಮ ಎಂಬವರಿಗೆ ತೋಳಿಗೆ ಗಾಯವಾಗಿದೆ. ಬಾಣಂತಿ ನಂದಿನಿ, 1 ವರ್ಷದ ಮಗು ಆಶ್ಚರ್ಯ ರೀತಿಯಲ್ಲಿ ಪಾರಾಗಿದ್ದಾರೆ. ಆದರೆ ಇಷ್ಟೊಂದು ತೀವ್ರತೆಯ ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ.
ಮುಂಜಾವ 2:30ರ ಸುಮಾರಿಗೆ ಭಾರೀ ಸದ್ದು ಕೇಳಿಬಂದಿದ್ದು, ಗ್ರಾಮಸ್ಥರು ಮನೆಯಿಂದ ಹೊರಬಂದು ನೋಡಿದಾಗ ಸಿದ್ದರಾಜು ಅವರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು. ಅದರಡಿಯಲ್ಲಿ ಸಿಲುಕಿದ್ದವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಮಹದೇವಮ್ಮ, ಶೈಲ್ಲಪ್ಪ, ಸೋಮಣ್ಣ, ಸಿದ್ದರಾಜು, ಸುರೇಶ್ ಸೇರಿದಂತೆ ಇನ್ನಿತರ ಮನೆಗಳು ಹಾನಿಗೊಳಗಾಗಿವೆ ಎಂದು ತಿಳಿದುಬಂದಿದೆ.
ನಿಗೂಢ ಸ್ಫೋಟ: ಆರಂಭದಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡಿರಬಹುದೆಂದು ಭಾವಿಸಲಾಗಿತ್ತು. ಆದರೆ ಗ್ಯಾಸ್ ಸಿಲಿಂಡರ್ ಗೆ ಯಾವುದೇ ಹಾನಿಯಾಗಿಲ್ಲ. ಫ್ರಿಡ್ಜ್ ಸ್ಫೋಟಗೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಹಶೀಲ್ದಾರ್ ಕುನಾಲ್ ಇಒ ಮಹೇಶ್, ಡಿವೈಎಸ್ಪಿ ಜಿ.ನಾಗರಾಜು ಸ್ಥಳಕ್ಕೆ ಆಗಮಿಸಿದ್ದು, ಘಟನಾ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಿದ್ದಾರೆ.
ಷಯ ತಿಳಿದ ಹನೂರು ಶಾಸಕ ಆರ್.ನರೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಾನಿಗೊಳಗಾದ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
.